ಚಿರತೆ ಸೆರೆಗೆ ಥರ್ಮಲ್ ಡ್ರೋಣ್ ಬಳಕೆ

cherathe
Published on

ಮೈಸೂರು: ಎರಡು ವಾರಗಳಿಂದ ಅರಣ್ಯ ಇಲಾಖೆಗೆ ತಲೆನೋವಾಗಿರುವ ತಿ.ನರಸೀಪುರದ ಚಾಲಾಕಿ ಚಿರತೆಯನ್ನು ಸೆರೆ ಹಿಡಿಯಲು ಇಲಾಖೆಯ ಅಧಿಕಾರಿಗಳು ರಕ್ಷಣಾ ವ್ಯವಸ್ಥೆಯ ತಂತ್ರಜ್ಞಾನಗಳಲ್ಲಿ ಒಂದಾದ ಥರ್ಮಲ್ ಡ್ರೋಣ್ ಕ್ಯಾಮೆರಾವನ್ನು ಮಾಡುವ ಮೂಲಕ ಚಿರತೆ ಅಡಗಿರುವ ಪ್ರದೇಶವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ 43 ಹಳ್ಳಿಗಳಲ್ಲಿ ಚಿರತೆ ಓಡಾಡಿರುವ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆಗೆ ಕಬ್ಬಿನ ಗದ್ದೆಗಳೇ ದೊಡ್ಡ ಸಮಸ್ಯೆಯಾಗಿತ್ತು. ಆಳೆತ್ತರಕ್ಕೆ ಬೆಳೆದು ನಿಂತಿರುವ ಕಬ್ಬಿನ ಗದ್ದೆಯಲ್ಲಿ ಸುಲಭವಾಗಿ ಅಡಗಿ ಕುಳಿತುಕೊಳ್ಳುವ ಚಿರತೆಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿತ್ತು.

ಹತ್ತು ದಿನಗಳಿಂದ 15 ತಂಡ ನಿರಂತರವಾಗಿ ಚಿರತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದರೂ ಚಿರತೆಯ ಬಗ್ಗೆ ಒಂದಿಷ್ಟೂ ಮಾಹಿತಿ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಥರ್ಮಲ್ ಡ್ರೊಣ್ ಬಳಕೆ ಮಾಡಿ ಚಿರತೆ ಓಡಾಡುತ್ತಿರುವ ಪ್ರದೇಶವನ್ನು ಅರಣ್ಯ ಇಲಾಖೆ ಗುರುತಿಸಿದೆ.

ಐದು ಜನರ ನುರಿತ ತಜ್ಞರ ತಂಡ ಥರ್ಮಲ್ ಡ್ರೋಣ್‌ನೊಂದಿಗೆ ಚಿರತೆ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಎಂ.ಎಲ್.ಹುಂಡಿ ಬಳಿಯ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆ ಅಡಗಿ ಕುಳಿತಿರುವ ಬಗ್ಗೆ ನಿಖರ ಮಾಹಿತಿ ನೀಡಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆಯಿಂದ ಎಲ್ಲ ತಂಡಗಳು ಕಾರ್ಯಾಚರಣೆಗೆ ಇಳಿದಿದ್ದರೂ ಚಿರತೆ ತಾನು ಅಡಗಿ ಕುಳಿತಿರುವ ಪೊದೆಯಿಂದ ಆಚೆ ಬರುತ್ತಿಲ್ಲ. ಜತೆಗೆ ಏಕಾಏಕಿ ಯಾರೊಬ್ಬರೂ ಅದರ ಬಳಿ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಅಕ್ಟೋಬರ್ 30ರಂದು ಯುವಕ ಹಾಗೂ ಡಿ.1ರಂದು ಯುವತಿಯನ್ನು ಬಲಿ ಪಡೆದಿರುವ ಚಿರತೆ ಚಾಲಾಕಿಯಾಗಿದ್ದು, ತಾನು ಓಡಾಡುವ ಪ್ರದೇಶದ ಒಂದಿಷ್ಟೂ ಸುಳಿವನ್ನು ಬಿಟ್ಟುಕೊಡುತ್ತಿಲ್ಲ. ಹಗಲೆಲ್ಲ ಪೊದೆ, ಕಬ್ಬಿನ ಗದ್ದೆಯಲ್ಲಿ ಅಡಗಿಕೊಳ್ಳುವ ಚಿರತೆ ಸಂಜೆಯಾಗುತ್ತಿದ್ದಂತೆ ತನ್ನ ಚಲನವಲನ ಆರಂಭಿಸುತ್ತಿದೆ. ಪರಿಣಾಮ, ಇಲಾಖೆಗೆ ರಾತ್ರಿಯಲ್ಲಿ ಚಿರತೆ ಸೆರೆ ಹಿಡಿಯುವುದು ಸವಾಲಾಗಿದೆ. ಜತೆಗೆ, ವಿವಿಧ ಭಾಗಗಳಲ್ಲಿ 16 ಬೋನ್‌ಗಳನ್ನು ಇರಿಸಿದ್ದರೂ ಚಿರತೆ ಅದರ ಬಳಿ ಸುಳಿಯದೆ ತನ್ನ ಚಾಲಾಕಿತನವನ್ನು ಪ್ರದರ್ಶಿಸುತ್ತಿದೆ.

ಏನಿದು ಥರ್ಮಲ್ ಡ್ರೋಣ್?:
ಹಗಲು, ರಾತ್ರಿ ವೇಳೆ ಯಾವುದೇ ಚಲನವಲನವನ್ನು ಸ್ಪಷ್ಟವಾಗಿ ಗುರುತಿಸಲ್ಪಡುವ ಹಾಗೂ ಚಳಿ, ಮಳೆ, ಗಾಳಿ, ಇಬ್ಬನಿ ಸೇರಿದಂತೆ ಎಲ್ಲ ತರಹದ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯಾಮೆರಾ ಇದಾಗಿದೆ. ಈ ಥರ್ಮಲ್ ಡ್ರೋಣ್ ಕ್ಯಾಮೆರಾವನ್ನು ಇದುವರೆಗೆ ಭಾರತೀಯ ಸೇನೆ ಗಡಿಯಲ್ಲಿ ಬಳಸುತ್ತಿತ್ತು. ಆದರೆ, ವನ್ಯಜೀವಿ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಥರ್ಮಲ್ ಡ್ರೋಣ್ ಬಳಕೆ ಮಾಡುತ್ತಿರುವುದು ಇದೆ ಮೊದಲು ಮತ್ತು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net