ನೀರು ಪೋಲು ತಪ್ಪಿಸಲು ಟಾರ್ಪಾಲಿನ್ ಬಳಕೆ

Use of tarpaulin to avoid water wastage
ಮುದ್ದೇಬಿಹಾಳ ಕೆರೆಗೆ ನೀರು ಹರಿಸುವ ಕಾಲುವೆಗೆ ಪ್ಲಾಸ್ಟಿಕ್ ಟಾರ್ಪಾಲಿನ್ ಹಾಕಿ ನೀರು ಪೋಲಾಗದಂತೆ ಮಾಡುತ್ತಿರುವ ಅಗಸಬಾಳ ಗ್ರಾಮಸ್ಥರು. ಅರವಿಂದ ಕಾಶಿನಕುಂಟಿ ಮತ್ತಿತರರು ಇದ್ದಾರೆ.
Published on

ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಕೆರೆ ತುಂಬಿಸಲು ಅಗಸಬಾಳ ಗ್ರಾಮಸ್ಥರ ನೇತೃತ್ವದಲ್ಲಿ ಹಳ್ಳೂರ, ಜಾಯವಾಡಗಿ ಗ್ರಾಮಸ್ಥರು ಶ್ರಮದಾನ ಮಾಡಿದ್ದಲ್ಲದೇ ಅಂದಾಜು 2 ಲಕ್ಷ ರೂ. ಖರ್ಚು ಮಾಡಿ ಕಾಲುವೆಯಲ್ಲಿ 400 ಮೀಟರ್ ಉದ್ದದ ಪ್ಲಾಸ್ಟಿಕ್ ಟಾರ್ಪಾಲಿನ್ ಹಾಕಿ ನೀರು ಪೋಲಾಗದಂತೆ ನೋಡಿಕೊಂಡಿದ್ದಾರೆ.

ಆಲಮಟ್ಟಿ ಜಲಾಶಯದಿಂದ ಚಿಮ್ಮಲಗಿ, ಮುಳವಾಡ ಏತ ನೀರಾವರಿ ಕಾಲುವೆಗಳ ಮೂಲಕ ಜಿಲ್ಲಾ ಪಂಚಾಯಿತಿ ಮತ್ತು ನೀರಾವರಿ ಕೆರೆಗಳನ್ನು ತುಂಬಿಸಲಾಗುತ್ತಿದೆ. ಫೆ. 26ರಿಂದ ಮುಳವಾಡ ಏತ ನೀರಾವರಿ ಕಾಲುವೆ ಮೂಲಕ ಅಗಸಬಾಳ ಕೆರೆಗೆ ನೀರು ಹರಿಯುತ್ತದೆ ಎನ್ನುವುದು ಗ್ರಾಮಸ್ಥರಿಗೆ ಗೊತ್ತಾಯಿತು. ಆದರೆ ಕಾಲುವೆಯಲ್ಲಿ ನೀರು ಹರಿಸಿದಾಗ ಕಾಲುವೆ ಮೇಲ್ಭಾಗದಲ್ಲಿ ಅಂದಾಜು 1 ಕಿಮೀ ಅಂತರದವರೆಗೂ ಸಿಮೆಂಟ್ ಕಾಂಕ್ರಿಟ್ ಬೆಡ್ ಮತ್ತು ಎರಡೂ ಕಡೆ ತಡೆಗೋಡೆ ಮಾಡಿಲ್ಲ ಎನ್ನುವುದು ಗ್ರಾಮಸ್ಥರಿಗೆ ಗೊತ್ತಿತ್ತು. ಕಾಲುವೆಯಲ್ಲಿ ನೀರು ಹರಿಸಿದಾಗ ಸಿಮೆಂಟ್ ಕಾಂಕ್ರಿಟ್ ಇಲ್ಲದ ಭಾಗದಲ್ಲಿ ಕಾಲುವೆ ಒಡೆದುಕೊಂಡು ನೀರು ಮುಂದೆ ಸಾಗದೆ ವ್ಯರ್ಥವಾಗಿ ಅಕ್ಕಪಕ್ಕ ಹರಿಯುತ್ತಿತ್ತು. ಇದನ್ನು ತಡೆಯಲು ಕಾಲುವೆಯ ಯಾವ ಭಾಗದಲ್ಲಿ ಸಡಿಲ ಮಣ್ಣು ಇದೆಯೋ ಅಲ್ಲಿ ಪ್ಲಾಸ್ಟಿಕ್ ಟಾರ್ಪಾಲಿನ್ ಹೊದಿಸಿ ನೀರು ಪೋಲಾಗದಂತೆ ಮಾಡುವ ಚಿಂತನೆ ನಡೆಸಿದರು.

ಅಗಸಬಾಳ ಗ್ರಾಮಸ್ಥರು ಹೆಚ್ಚಿನ ಪ್ರಮಾಣದಲ್ಲಿ ಸ್ವಂತದ ಹಣ ಹಾಕಿದರು. ಹಳ್ಳೂರ ಗ್ರಾಮಸ್ಥರು ಇವರಿಗೆ ಕೈ ಜೋಡಿಸಿದರು. ಜಾಯವಾಡಗಿಯವರು ಕೈಜೋಡಿಸುವ ವಾಗ್ದಾನ ಮಾಡಿದರು. ಎಲ್ಲ ಸೇರಿ ಅಂದಾಜು 2 ಲಕ್ಷ ಹಣ ಸಂಗ್ರಹಿಸಿದರು. ಇದರಲ್ಲಿ 1.30 ಲಕ್ಷ ಹಣದಲ್ಲಿ ಟಾರ್ಪಾಲಿನ್ ಖರೀದಿಸಿ ಅದನ್ನು ಕಾಲುವೆಯ ಸ್ಥಳಕ್ಕೆ ಸಾಗಿಸಲು 20 ಸಾವಿರ ರೂ. ಸಾರಿಗೆ ವೆಚ್ಚವಾಗಿ ಖರ್ಚು ಮಾಡಿದರು. ಇನ್ನುಳಿದ ಹಣವನ್ನು ಎರಡು ಜೆಸಿಬಿ, ಒಂದು ಹಿಟಾಚಿ ಯಂತ್ರಗಳಿಗೆ ಬಳಸಿ, ಅಂದಾಜು 150 ಜನರು ಸ್ವಯಂ ಶ್ರಮದಾನದ ಮೂಲಕ ಕಾಲುವೆಯೊಳಗಿನ ಮಣ್ಣನ್ನು ಗಟ್ಟಿಗೊಳಿಸಿ, ಅಲ್ಲಲ್ಲಿ ಬಿದ್ದಿದ್ದ ತೆಗ್ಗು ದಿನ್ನೆಗಳನ್ನು ಮುಚ್ಚಿ, ಹಿಂದೆ ನೀರು ಹರಿಸಿದಾಗ ಮುಚ್ಚಿ ಹೋಗಿದ್ದ ಭಾಗವನ್ನು ಮತ್ತೆ ತೋಡಿ ಕಾಲುವೆ ಸಿದ್ಧಗೊಳಿಸಿ ತಮ್ಮೂರಿನ ಕೆರೆಗೆ ನೀರು ಹರಿಯುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net