

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ತಾತ್ಕಲಿಕ ಪರಿಹಾರವಷ್ಟೆ. ಆದರೆ, ಈ ಯೋಜನೆಗಳಿಗೆ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿರುವ ಅನುದಾನ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ.ಎನ್.ಪ್ರಭುಸ್ವಾಮಿ ಖಂಡಿಸಿದರು.
ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ವತಿಯಿಂದ ನಗರದ ನಂಜರಾಜ್ ಬಹದ್ದೂರ್ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನ ಸದ್ಬಳಕೆಗಾಗಿ ಎಸ್‌ಸಿ/ ಎಸ್‌ಟಿ ಜನಾಂದೋಲನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಮೋಸ ಮಾಡಲಾಗಿದೆ ಎಂದರು.
ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಪರಿಶಿಷ್ಟರ ಕಲ್ಯಾಣಕ್ಕೆ, ಶಾಶ್ವತ ಭೂಮಿ ಹೊಂದುವ ಯೋಜನೆ, ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಬಳಸಬೇಕು. ಇದಕ್ಕಾಗಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿಜವಾದ ಅಭಿವೃದ್ಧಿಗೆ ಪಣ ತೊಟ್ಟಿದ್ದು, ರಾಜ್ಯಾದ್ಯಂತ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ ನಡೆಸುತ್ತಿದೆ.
ಸರ್ಕಾರಗಳು, ಸಚಿವರು, ಶಾಸಕರು, ಇತರೆ ಜನಪ್ರತಿನಿಗಳು, ಅನುಷ್ಠಾನ ಅಧಿಕಾರಿಗಳು, ಸಂಘಟನೆ ಹಾಗೂ ಪಕ್ಷಗಳ ಮುಖಂಡರು ಪರಿಶಿಷ್ಟರ ಸ್ವಾವಲಂಬನೆ ಹಾಗೂ ಸ್ವಾಭಿಮಾನ ರೂಪಿಸುವಲ್ಲಿ ನಾವು ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ವೇದಿಕೆ ಮುಖಂಡ ಭೀಮನಹಳ್ಳಿ ಸೋಮೇಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ನಾಯಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ರಾಜ್ಯ ಬಿವಿಎಸ್ ಮುಖಂಡ ಶ್ರೀನಿವಾಸ್, ಬಿಪಿಎಸ್ ಮುಖಂಡ ಸೋಸಲೆ ಸಿದ್ದರಾಜು ಇತರರಿದ್ದರು.