ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಹಣ ಬಳಕೆ

22 HANUR 2
Published on

ಹನೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಜನರಿಗೆ ಅನ್ಯಾಯವೆಸಗುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕಿಡಿಕಾರಿದರು.


ಪಟ್ಟಣದ ಸಮೀಪದ ಆರ್.ಎಸ್.ದೊಡ್ಡಿ ಶ್ರೀಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಲೋಕಸಭೆ ಚುನಾವಣೆ ಸಂಬಂಧ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


1992ರಲ್ಲಿ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಯುಪಿಐ ಸರ್ಕಾರ 2014ರವರೆಗೆ ಅದನ್ನು ತಡೆಗಟ್ಟುವ ಪ್ರಯತ್ನ ಮಾಡಲಿಲ್ಲ. ಈ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ದೇಶವನ್ನು ಲೂಟಿ ಮಾಡಿತ್ತು. ಭ್ರಷ್ಟಾಚಾರ ವ್ಯಾಪಕವಾಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದ ಅಧಿಕಾರಾವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಜನಮನ್ನಣೆ ಗಳಿಸಿದ್ದಾರೆ. 2013ರಲ್ಲಿ 241ರೂ.ಇದ್ದ ತಲಾ ಆದಾಯ ಈಗ 926 ರೂ.ಗೆ ಏರಿಕೆಯಾಗಿದೆ. ಜನಧನ್ ಯೋಜನೆಯಡಿ 52 ಕೋಟಿ ರೂ.ಬ್ಯಾಂಕ್ ಖಾತೆ ತೆರೆಯುವ ಮೂಲಕ ಜನ ಸಾಮಾನ್ಯರಿಗೆ ನೇರವಾಗಿ ನಗದು ವರ್ಗಾವಣೆಯಾಗಿದ್ದು, ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ 30 ಲಕ್ಷ ಕೋಟಿ ರೂ. ವರ್ಗಾವಣೆಯಾಗಿದ್ದು, ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಇತ್ತ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ 11,144 ಕೋಟಿ ರೂ.ಹಾಗೂ ಈ ವರ್ಷ 14,500 ಕೋಟಿ ರೂ.ಎಸ್ಸಿ, ಎಸ್ಟಿ ಯೋಜನೆಯ ಹಣವನ್ನು ಬಳಕೆ ಮಾಡಿಕೊಂಡಿದ್ದು, ಜನರಿಗೆ ದ್ರೋಹವೆಸಗಿದೆ ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್ ಮಾತನಾಡಿ, ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುವ ಮೂಲಕ ದೇಶದಲ್ಲಿ ಇತಿಹಾ ಸೃಷ್ಟಿಸಿದ್ದಾರೆ. ಆರ್ಥಿಕ ಭದ್ರತೆ ಹಾಗೂ ಸೈನಿಕರನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಜನಪರ ಯೋಜನೆಗಳಿಂದ ಜನಮನ್ನಣೆ ಗಳಿಸಿದ್ದಾರೆ. ಆದರೆ ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಮರ್ಪಕ ಮಳೆಯಾಗಲಿಲ್ಲ. ಬರ ಆವರಿಸಿತು. ಸಿಎಂ ಸಿದ್ದರಾಮಯ್ಯ ಅವರು ಬರ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ಹಣ ಬಂದಿಲ್ಲ. ಇನ್ನು ನುಡಿದಂತೆ ನಡೆದ ಸರ್ಕಾರ ಎಂದು ಬೀಗುತ್ತಿದ್ದಾರೆ. ಆದರೆ ಎಸ್ಸಿ, ಎಸ್ಟಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ದಲಿತ ವಿರೋಧಿ ಸರ್ಕಾರ ಎಂದು ಟೀಕಿಸಿದರು.


ನರೇಂದ್ರ ಮೋದಿ ಮತ್ತೇ ಪ್ರಧಾನಿಯಾಗಬೇಕು: ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವವೇ ಮೆಚ್ಚಿದೆ. ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಆದ್ದರಿಂದ ನರೇಂದ್ರ ಮೋದಿ ಅವರ ಆಡಳಿತ ದೇಶಕ್ಕೆ ಆಗತ್ಯವಾಗಿದ್ದು, ಮತ್ತೆ ಪ್ರಧಾನಿಯಾಗಬೇಕಿದೆ. ಆದ್ದರಿಂದ ಬಾಲರಾಜು ಅವರನ್ನು ಗೆಲ್ಲಿಸುವ ಮೂಲಕ ಚಾ.ನಗರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಅರಳಿಸಬೇಕು ಎಂದು ತಿಳಿಸಿದರು.


400ಕ್ಕೂ ಹೆಚ್ಚು ಸ್ಥಾನ ಗಳಿಸಬೇಕು: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯುವುದರ ಮೂಲಕ ಅವರು ವಿಶ್ವ ಮನ್ನಣೆ ಗಳಿಸಿದ್ದಾರೆ. ಇವರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಗೆಲ್ಲಲು ಕಾರಣವಾಗಿದೆ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಾಲರಾಜು ಅವರು ಗೆಲ್ಲುವುದರ ಮೂಲಕ ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳು ಗಳಿಸಲಿದೆ ಎಂದರು.


ಪಕ್ಷದ ಅಭ್ಯರ್ಥಿ ಬಾಲರಾಜು ಮಾತನಾಡಿ, ಬಡ ಕುಟುಂಬದಿಂದ ಬಂದಿರುವ ನಾನು ಸುಮಾರು 40 ವರ್ಷದಿಂದಲೂ ಜನ ಸೇವೆ ಮಾಡುತ್ತಾ ಬಂದಿದೇನೆ. ಆದ್ದರಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಚುನಾವಣಾ ಪ್ರಭಾರಿ ಪ್ರಣೇಶ್, ಸಂಚಾಲಕ ಪ್ರೊ.ಮಲ್ಲಿಕಾರ್ಜುನಪ್ಪ, ವೆಂಕಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಕ್ಷೇತ್ರದ ಉಸ್ತುವಾರಿ ರೇವಣ್ಣ, ಮಂಡಲಾಧ್ಯಕ್ಷರಾದ ಹನೂರಿನ ವೃಷಭೇಂದ್ರಸ್ವಾಮಿ, ಮ.ಬೆಟ್ಟದ ರಾಜು, ಮುಖಂಡರಾದ ಪ್ರೀತನ್‌ನಾಗಪ್ಪ, ನಿಶಾಂತ್, ವೆಂಕಟೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net