ಪರೀಕ್ಷಾ ಕೇಂದ್ರಗಳ ಭದ್ರತೆಗೆ ನಿವೃತ್ತ ಸೈನಿಕರ ಬಳಕೆ

4 HLR 1
Published on

ಹೊಳೆಆಲೂರ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಹಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಘಟ್ಟ. ನಕಲುಮುಕ್ತ ವಾತಾವರಣದಲ್ಲಿ ನಿರ್ಭೀತಿಯಿಂದ ಮಕ್ಕಳು ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಗೆ ಈ ಬಾರಿ ಹೋಬಳಿಯ ನಿವೃತ್ತ ಯೋಧರು ಸಹಾಯ, ಸಹಕಾರ ನೀಡಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಭದ್ರತೆಗೆ ಕಲ್ಮೇಶ್ವರ ಪ್ರೌಢಶಾಲೆ ಹಾಗೂ ಯಚ್ಚರೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 6 ದಿನ ಉಚಿತ ಸೇವೆ ನೀಡಿದ 10 ನಿವೃತ್ತ ಯೋಧರಿಗೆ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ತಂತ್ರಜ್ಞಾನ ಬಳಕೆ ಅನಿವಾರ್ಯವಾಗಿದೆ. ಅಂಕ ಗಳಿಕೆ ಮಾತ್ರ ವಿದ್ಯಾರ್ಥಿ ಜೀವನ ರೂಪಿಸುವುದಿಲ್ಲ. ಸಂಸ್ಕಾರಯುತ ಬದುಕು, ನೈತಿಕ ಜೀವನ, ಮಾನವೀಯ ಸಂಬಂಧ, ಸಮಾಜಮುಖಿ ಚಿಂತನೆ ಅವಶ್ಯವಾಗಿ ಬೆಳೆಸಿಕೊಳ್ಳಬೇಕು. ದೇಶ ಸೇವೆ ಜತೆಗೆ ಸಮಾಜಮುಖಿ ಕಾರ್ಯ ಸೈನಿಕರಲ್ಲಿ ರಕ್ತಗತವಾಗಿ ಬಂದಿದೆ. ಪರೀಕ್ಷೆಯ ಯಶಸ್ಸಿಗೆ ಸಹಾಯ ಸಹಕಾರ ನೀಡಿದ ಯೋಧರಿಗೆ ಇಲಾಖೆಯ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.

ಯೋಧರಾದ ಹೊಳೆಆಲೂರಿನ ಮಲ್ಲಿಕಾರ್ಜುನ ಅಂಗಡಕಿ, ಈರಣ್ಣ ಹಡಪದ, ಹೊಳೆಮಣ್ಣೂರು ಗ್ರಾಮದ ಪ್ರಕಾಶ ಕಾಮಣ್ಣವರ, ಮುತ್ತಣ್ಣ ಗಡಾದ, ಚನ್ನಯ್ಯ ಮಠಪತಿ, ಸಂತೋಷ ಮಣ್ಣೂರ, ಹನಮಪ್ಪ ಮಾದರ, ಶರಣಪ್ಪ ಖವಾಸ್ತ, ಜಕನೂರ ಗ್ರಾಮದ ವೀರಣ್ಣ ಮಲ್ಲಕಾಜಪ್ಪನ್ನವರ, ಗಾಡಗೋಳಿ ಗ್ರಾಮದ ಸುರೇಶ ಗಾಣಿಗೇರ ಅವರನ್ನು ಸನ್ಮಾನಿಸಲಾಯಿತು.

ಕಲ್ಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎನ್. ತೇಜಿಗೌಡ್ರ, ಡಿ.ಎಸ್. ಶೆಲ್ಲಿಕೇರಿ, ಸಮನ್ವಯ ಅಧಿಕಾರಿ ಎಫ್‌ಎ. ಫಣಿಬಂದ, ಮುಖ್ಯಶಿಕ್ಷಕ ಅಮಿತಕುಮಾರ ಹಿರೇಮಠ, ಡಿ.ಬಿ. ಇನಾಮದಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ದಾನರಡ್ಡಿ, ವಿಶ್ವನಾಥ ಧನ್ನೂರ, ಎಸ್.ಕೆ. ಆಡಿನ, ಎ.ಎನ್. ನದಾಫ, ಎಂ.ಎಸ್. ಕರಡದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net