ಆಲೆಮನೆ ಒಲೆಗೆ ಪ್ಲಾಸ್ಟಿಕ್, ಟೈಯರ್, ಮೆಟಲ್ ಬಳಕೆ

29bdvt2
ವೀರಾಪುರ ಗ್ರಾಪಂ ವ್ಯಾಪ್ತಿಯ ಆಲೆಮನೆಗಳ ಒಲೆಗೆ ಬಳಸಲು ಪ್ಲಾಸ್ಟಿಕ್ ಸಂಗ್ರಹಿಸಿರುವುದು.
Published on

ಭದ್ರಾವತಿ: ಆಲೆಮನೆಗಳಲ್ಲಿ ಬೆಲ್ಲ ತಯಾರಿಸಲು ಬಳಸುತ್ತಿರುವ ತ್ಯಾಜ್ಯಗಳಿಂದಾಗಿ ಪರಿಸರ ಮಾಲಿನ್ಯದ ಜತೆಗೆ ಅಡಕೆ, ತೆಂಗು, ಬಾಳೆ ಗಿಡಗಳ ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ಗ್ರಾಮಸ್ಥರ ಆರೋಗ್ಯ ಹಾಳಾಗುತ್ತಿದೆ ಎಂದು ಆರೋಪಿಸಿ ಆಲೆಮನೆ ಸುತ್ತಮುತ್ತಲ ಜಮೀನುಗಳ ಮಾಲೀಕರು ಹಾಗೂ ವೀರಾಪುರ ಗ್ರಾಪಂ ಅಽಕಾರಿಗಳು ಆಲೆಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಗ್ರಾಪಂ ಅಽಕಾರಿಗಳು ಹಾಗೂ ಗ್ರಾಮಸ್ಥರು ಆಲೆಮನೆಗೆ ಭೇಟಿ ನೀಡಿ, ಅನುಪಯುಕ್ತ ಪ್ಲಾಸ್ಟಿಕ್ ವಸ್ತುಗಳು, ಟೈಯರ್ ಟ್ಯೂಬ್‌ಗಳು, ಮೆಟಲ್‌ಗಳನ್ನು ಉರಿಸಿ ಬೆಲ್ಲ ತಯಾರಿಕೆಯಲ್ಲಿ ತೊಡಗಿರುವ ಆಲೆಮನೆ ಮಾಲೀಕರಿಂದ ಸುತ್ತಮುತ್ತಲ ಜಮೀನುಗಳ ರೈತರು ನಿತ್ಯ ಜಮೀನುಗಳ ಕೆಲಸಕ್ಕೆ ಹೋಗುವುದೇ ದುಸ್ತರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿನ ಒಣಗಿದ ಸಿಪ್ಪೆ, ತರಗುಗಳನ್ನು ಸುಟ್ಟು ಬೆಲ್ಲ ತಯಾರಿಸುವ ಬದಲು ಒಲೆಗಳಿಗೆ ಪ್ಲಾಸ್ಟಿಕ್, ರಬ್ಬರ್, ತ್ಯಾಜ್ಯಗಳನ್ನು ಹಾಕಿ ಬೆಲ್ಲ ತಯಾರಿಸಲಾಗುತ್ತಿದೆ. ಇದರಿಂದ ಚಿಮಣಿ ಮೂಲಕ ಹೊರಸೂಸುವ ಕಪ್ಪು ಬಣ್ಣದ ಚಿಟ್ಟ (ಹೊಗೆ) ಸುತ್ತಮುತ್ತಲಿರುವ ಸಾವಿರಾರು ಎಕರೆ ಜಮೀನುಗಳ ಬೆಳೆಗಳ ಮೇಲೆ ಪರಿಣಾಮ ಬೀಳುತ್ತಿದೆ. ಈ ಕಪ್ಪು ಹೊಗೆಯು ಬೆಳೆಗಳ ಮೇಲೆ ಕುಳಿತುಕೊಳ್ಳುವುದರಿಂದ ಅದರ ಬೆಳವಣಿಗೆ ಕುಂಟಿತಗೊಳ್ಳುತ್ತಿದೆ. ಅಲ್ಲದೆ ಜಮೀನು ಕೆಲಸಕ್ಕೆ ಬರುವ ಕಾರ್ಮಿಕರು, ಜಮೀನುದಾರರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಾರದೊಳಗೆ ಒಲೆಯ ಚಿಮಣಿಯನ್ನು ಎತ್ತರಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವುದು ಕೈಬಿಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಥಳದಲ್ಲಿದ್ದ ಆಲೆಮನೆ ಮಾಲೀಕರಿಗೆ ಎಚ್ಚರಿಸಲಾಯಿತು.

ಜಮೀನುಗಳಲ್ಲೇ ಬಹಿರ್ದೆಸೆ
ರಾಗಿ, ಜೋಳದ ಹೊಲ, ಕಬ್ಬು, ಭತ್ತದ ಗದ್ದೆ, ಅಡಕೆ, ತೆಂಗು, ಬಾಳೆ ತೋಟಗಳಿಗೆ ಕಾಲಿಟ್ಟರೆ ಮಲ, ಮೂತ್ರದ ದುರ್ವಾಸನೆ ಬಡಿಯುತ್ತದೆ. ವೀರಾಪುರ ಗ್ರಾಪಂ ವ್ಯಾಪ್ತಿಯ ನೇರಲೆಕೆರೆ ರಸ್ತೆಯಲ್ಲಿ 7 ಆಲೆಮನೆಗಳು ಬೆಲ್ಲ ತಯಾರಿಕೆಯಲ್ಲಿ ತೊಡಗಿವೆ. ಒಂದೊAದು ಆಲೆಮನೆಯಲ್ಲಿ ಸುಮಾರು 10-15 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನೆರೆ ಊರುಗಳಿಂದ ಬಂದ ಎಲ್ಲರೂ ಆಲೆಮನೆಗಳಲ್ಲಿಯೇ ವಾಸಿಸುತ್ತಿದ್ದು ಅವರು ಶೌಚಗೃಹ ಕೊರತೆಯಿಂದ ಸುತ್ತಮುತ್ತಲ ಜಮೀನುಗಳಲ್ಲೇ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಇದು ಗದ್ದೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ವಾರದ ಗಡುವು ನೀಡಿರುವ ಪಿಡಿಒ
ಕಡಿಮೆ ಎತ್ತರವಿರುವ ಆಲೆಮನೆಯ ಬೆಂಕಿಯ ಚಿಮಣಿಗಳನ್ನು ವಾರದೊಳಗೆ ಎತ್ತರಿಸಬೇಕು. ಪ್ಲಾಸ್ಟಿಕ್ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅನುಪಯುಕ್ತ ವಸ್ತುಗಳನ್ನು ಬೆಂಕಿಗೆ ಹಾಕಿ ಬೆಲ್ಲ ತಯಾರಿಸಬಾರದು ಎಂದು ಆಲೆಮನೆಗಳಿಗೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿದ ಪಿಡಿಒ ಲತಾ ಸೂಚಿಸಿದರು. ಅಲ್ಲದೆ ಕಾರ್ಮಿಕರಿಗೆ ಶೌಚಗೃಹ ವ್ಯವಸ್ಥೆ ಮಾಡಿಸಬೇಕು. ಪರಿಸರ ಮಾಲಿನ್ಯ ತಡೆಯಲು ವಿಫಲವಾದಲ್ಲಿ ಆಲೆಮನೆ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net