

ಮೈಸೂರು: ಪ್ರಸ್ತುತ ಆಹಾರ ಪ್ಯಾಕೇಜಿಂಗ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಏಕಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆಗೆ ಉತ್ತೇಜನ ನೀಡಲು ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಆ.3, 4 ರಂದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ತಿಳಿಸಿದರು.
ಉತ್ತರ ಪ್ರದೇಶದ ಇಂಡಿಯನ್ ಪಲ್ಪ್ ಅಂಡ್ ಪೇಪರ್ ಟೆಕ್ನಿಕಲ್ ಅಸೋಸಿಯೇಷನ್ (ಇಪ್ಟಾ) ಸಹಯೋಗದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ದೇಶ ವಿದೇಶದ 350ಕ್ಕೂ ಹೆಚ್ಚು ತಂತ್ರಜ್ಞರು, ವಿಜ್ಞಾನಿಗಳು, ತಾಂತ್ರಿಕ ಸಲಹೆಗಾರರು, ಸಂಶೋಧಕರು ಪಾಲ್ಗೊಳ್ಳಲಿದ್ದಾರೆ. ಆ.3ರಂದು ಬೆಳಗ್ಗೆ 9.15ಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡುವರು. ಇಪ್ಟಾದ ಕಾರ್ಯದರ್ಶಿ ಎಂ.ಕೆ.ಗೋಯಲ್, ಅಧ್ಯಕ್ಷ ಗಣೇಶ್ ಭಡ್ತಿ, ಬ್ಯಾಂಕ್ ನೋಟ್ ಪೇಪರ್ ಮಿಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ತಲಿಕೇರಪ್ಪ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಹಾರೋದ್ಯಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಸಹಕಾರಿಯಾಗಲಿದೆ. ವಿಚಾರಗೋಷ್ಠಿಯಲ್ಲಿ ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಪೇಪರ್ ಉದ್ಯಮಗಳ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದರು.
ಇಪ್ಟಾ ಕಾರ್ಯದರ್ಶಿ ಎಂ.ಕೆ.ಗೋಯಲ್ ಮಾತನಾಡಿ, ಪೇಪರ್ ಬ್ಯಾಗ್, ಪೇಪರ್ ಸ್ಟ್ರಾ, ಪೇಪರ್‌ನಿಂದ ತಯಾರಿಸಿದ ಆಹಾರ ಪೊಟ್ಟಣಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ. ಆಹಾರ ಉದ್ಯಮದಲ್ಲಿ ಉತ್ತಮ ಕಾಗದದ ಪೊಟ್ಟಣಗಳನ್ನು ಬಳಕೆ ಮಾಡಲು ಪ್ರಾರಂಭಿಸಿದರೆ ಅದೊಂದು ಉತ್ತಮ ಪರಿಸರ ಸ್ನೇಹಿ ನಡೆಯಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಣೇಶ್ ಭಡ್ತಿ ಇದ್ದರು.