ಕಡಬ: ಕಡಬದಲ್ಲಿ ಹಿಟಾಚಿ, ಜೆಸಿಬಿ, ಟಿಪ್ಪರ್ ಮಾಲೀಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಹೇಳಿಕೆಯನ್ನು ನೀಡಿ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ, ಇದು ಖಂಡನೀಯ ಇದರ ಬಗ್ಗೆ ಕಾನೂನು ಹೋರಾಟ ಮಾಡಲು ಚಿಂತಿಸಲಾಗುವುದು ಎಂದು ಕಡಬ ತಾಲೂಕು ಅರ್ಥ್ ಮೂವರ್ಸ್ ಅಸೋಶಿಯೇಷನ್ ಅಧ್ಯಕ್ಷ ಮನಮೋಹನ ರೈ ಹೇಳಿದರು.
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಬದಲ್ಲಿ ಸ್ವಯಂಘೋಷಿತ ಪತ್ರಕರ್ತರೊಬ್ಬರು ನಮ್ಮ ಬಗ್ಗೆ ಮಾನಹಾನಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಕಡಬ ತಾಲೂಕಿನ ನಗರ ಅಭಿವೃದ್ಧಿಯಲ್ಲಿ ನಮ್ಮ ಪಾಲು ಕೂಡ ಇದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಲವು ವರ್ಷಗಳಲ್ಲಿ ನಮ್ಮ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ. ಟಿಪ್ಪರಿನಲ್ಲಿ ಮಣ್ಣನ್ನು ಸಾಗಿಸುವಾಗ ಟರ್ಪಾಲು ಹಾಕಿ ಸಾಗಿಸುವುದು, ಡೋರ್ ಅಳವಡಿಸಿ ಸುರಕ್ಷತೆ ಕಾಪಾಡುವುದು ಹೀಗೆ ಕಾನೂನು ರೀತಿಯಲ್ಲಿ ನಮ್ಮ ಕೆಲಸಗಳನ್ನು ಮಾಡಲು ನಾವು ಬದ್ಧರಿದ್ದೇವೆ. ಕೆಲವು ಮಾಧ್ಯಮಗಳಿಗೆ ನಮ್ಮ ಬಗ್ಗೆ ತಪ್ಪು ಸಂದೇಶವನ್ನು ಯಾರೋ ಕೊಟ್ಟಿದ್ದಾರೆ. ಪತ್ರಕರ್ತನನ್ನು ಟಿಪ್ಪರಿನ ಅಡಿಗೆ ಹಾಕಿ ಸಾಯಿಸಬೇಕೆಂದು ಸಂಘಟನೆಯ ನಾವೆಲ್ಲ ಸೇರಿ ಸೂಚಿಸಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಇದು ಸತ್ಯಕ್ಕೆ ದೂರದ ವಿಚಾರವಾಗಿದೆ ಎಂದು ಹೇಳಿದರು.
ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ್, ಖಜಾಂಜಿ ಕೆ.ಎಮ್.ಹಾರೀಶ್, ವಲಯಾಧ್ಯಕ್ಷ ಆನಿಷ್ ತೋಮ್ಸನ್, ಸದಸ್ಯರಾದ ಹರಿಕೃಷ್ಣ, ಸದಾನಂದ ಪಿ. ಮತ್ತಿತರರು ಉಪಸ್ಥಿತರಿದ್ದರು.