ಆಧುನಿಕ ಪರಿಕರಗಳ ಬಳಕೆ ಇತಿಮಿಯಲ್ಲಿ ಇರಲಿ: ಡಾ. ನಾ.ಡಿಸೋಜ

10sor1
ಸೊರಬದಲ್ಲಿ ರಾಜ್ಯ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶ್ರೀ ಡಾ. ಮಹಾಂತ ಸ್ವಾಮೀಜಿ, ನಾ.ಡಿಸೋಜ, ನಿಜಗುಣ ಚಂದ್ರಶೇಖರ್, ಶಂಕರ್ ಶೇಟ್, ಎಲ್.ರಾಜಶೇಖರ್, ಮಹೇಶ್ ಖಾರ್ವಿ ಇತರರಿದ್ದರು.
Published on

ಸೊರಬ: ಆಧುನಿಕ ಪರಿಕರಗಳು ಇಡೀ ಬದುಕನ್ನೇ ಆವರಿಸಿದ್ದು ಆಧುನಿಕತೆ ಒಂದು ಶಾಪವಾಗಿ ಪರಿಣಮಿಸುತ್ತಿದೆ. ಬದಲಿಗೆ ಹಿತ ಮಿತವಾಗಿ ಬಳಸಿಕೊಂಡು ಸಮಾಜ ಮತ್ತು ನಮ್ಮ ಏಳಿಗೆಗೆ ಅನೂಕೂಲವಾಗುವಂತೆ ಬಳಸಿಕೊಳ್ಳುವ ಮೂಲಕ ಆಧುನಿಕತೆಯ ಮಹತ್ವ ಉಳಿಸಬೇಕು ಎಂದು ಖ್ಯಾತ ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಪಟ್ಟಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಶಿಕ್ಷಕರ ದಿನಾಚಾರಣೆ ಅಂಗವಾಗಿ ಏರ್ಪಡಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವಕರ ಮೊಬೈಲ್ ಬಳಕೆ ಅತಿರೇಕಕ್ಕೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಶಿಕ್ಷಕರ ಬಗ್ಗೆ ಇರುವ ಪ್ರೀತಿ ಗೌರವ ಹಾಗೂ ಧೋರಣೆ ಇಂದಿಗೂ ಬದಲಾಗಿಲ್ಲ. ನಾವು ಓದುವಾಗ ಬಡತನ ಇತರ ಕಾರಣಗಳಿಂದ ಸಂತೋಷದಿAದ ಶಾಲೆಗೆ ಹೋಗಲಾಗಲಿಲ್ಲ. ಶಾಲೆಗೆ ಹೋದ ಬಳಿಕ ಅಲ್ಲಿಯ ಸ್ನೇಹಿತರು, ಶಿಕ್ಷಕರ ಪ್ರೀತಿ ಹಾಗೂ ಅಲ್ಲಿಯ ವಾತಾವರಣಕ್ಕೆ ಹೊಂದಿಕೊAಡು ಅಸ್ಪಷ್ಟ ಶಿಕ್ಷಣವನ್ನು ಪಡೆದು ರೂಢಿಯ ಮೂಲಕ ಎಲ್ಲವನ್ನೂ ಕಲಿಯಲು ಪ್ರಯತ್ನಿಸಿದೆವು. ಆ ಶಿಕ್ಷಣ ನಮ್ಮನ್ನು ಗಟ್ಟಿಗೊಳಿಸಿತು. ಒಂದು ಕಾಲದಲ್ಲಿ ಶಿಕ್ಷಕರನ್ನು ಬಡ ಮೇಷ್ಟುç ಎಂದು ಕರೆಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಉತ್ತಮ ವೇತನ, ಸವಲತ್ತುಗಳನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದು ಸಂತಸದ ಸಂಗತಿ. ಶಿಕ್ಷಣ ನಮಗೆ ಏನನ್ನು ಕೊಡುತ್ತದೆ ಎನ್ನುವುದಕ್ಕಿಂತ ಶಿಕ್ಷಣದಿಂದ ಜಾಗೃತಿಗೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಕೂಡ ಬದಲಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಽಕಾರಿ ಟಿ.ಎಂ.ಸತ್ಯನಾರಾಯಣ ಮಾತನಾಡಿ, ಶಿಕ್ಷಣ ಕೇತ್ರ ಇಂದು ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಆವಿಷ್ಕಾರಗೊಳ್ಳುತ್ತಿದ್ದು ಅದಕ್ಕನುಗುಣವಾಗಿ ಶಿಕ್ಷಕರು ಬದಲಾಗಬೇಕು. ಮೌಲ್ಯಗಳನ್ನು ಬೋಽಸುವುದಕ್ಕಿಂತ ಮೌಲ್ಯಗಳು ಅಂತರಗತವಾಗಿ ಬೆಳೆಯುವಂತೆ ನೋಡಿಕೊಂಡಾಗ ವಿದ್ಯಾರ್ಥಿಗಳಲ್ಲಿ ಮೌಲ್ಯ ಹೆಚ್ಚಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಔಪಚಾರಿಕ ಶಿಕ್ಷಣದ ಮೌಲ್ಯಕ್ಕೆ ಒತ್ತು ನೀಡಬೇಕು ಎಂದರು.
ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಆರು ಹಾಗೂ ರಾಜ್ಯಕ್ಕೆ ಜಿಲ್ಲೆಯಿಂದ ಒಬ್ಬರು ಶಿಕ್ಷಕರು ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಆನವಟ್ಟಿ ಬಾಲಾಜಿ ನೃತ್ಯ ಶಾಲಾ ಮಕ್ಕಳಿಂದ ಹಾಗೂ ಶಿಕ್ಷಕರಿಂದ ಕವನ ವಾಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಉದ್ಯಮಿ ನಿಜಗುಣ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್, ಸಿಪಿಐ ಎಲ್.ರಾಜಶೇಖರ್, ಕಾರ್ಯದರ್ಶಿ ಮಹೇಶ್ ಖಾರ್ವಿ, ಪೂರ್ಣಿಮಾ, ದೀಪಾ, ಮಂಜುನಾಥ ಇತರರಿದ್ದರು.

ಮಕ್ಕಳನ್ನು ತಿದ್ದಲು ಅವಕಾಶ ಕೊಡಿ
ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ತಿದ್ದಿ ತೀಡಲು ಸಮಾಜ ಮುಕ್ತ ಅವಕಾಶ ನೀಡದಿದ್ದರೆ ವಿದ್ಯಾರ್ಥಿಗಳಲ್ಲಿ ಸ್ವೇಚ್ಛಾಚಾರಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಎಚ್ಚರಿಸಿದರು. ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಮಕ್ಕಳು ಮತ್ತು ಸಮಾಜವನ್ನು ವ್ಯವಸ್ಥಿತವಾಗಿ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಹಿರಿದು. ೧೨ನೇ ಶತಮಾನದಲ್ಲಿ ಗುರುಕುಲ ಪದ್ಧತಿಯಿಂದ ಶಿಷ್ಯಂದಿರು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿತು, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದರು. ಇಂದು ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳು ಪಡೆಯುವ ಮೂಲಕ ಸಮಾಜದ ಉನ್ನತಿಗೆ ಕಾರಣರಾಗಬೇಕಿದೆ. ಶಿಕ್ಷಕರು ನಿರಂತರ ಅಭ್ಯಾಸದಿಂದ ಪರಿವರ್ತನೆಗೊಂಡು ಆದರ್ಶ ಶಿಕ್ಷಕನಾಗಲು ಸಾಧ್ಯವಾಗುತ್ತದೆ ಎಂದರು. ಸಮಾಜ ಶಿಕ್ಷಕರನ್ನು ಗೌರವಯುತವಾಗಿ ಕಾಣುವ ಮೂಲಕ ಅವರ ಕರ್ತವ್ಯಕ್ಕೆ ಉತ್ತಮ ಪ್ರೇರಣೆ ನೀಡುವುದು ಅವಶ್ಯಕ. ಶಿಕ್ಷಕರನ್ನು ಗುರುತಿಸಿ ಅವರಿಗೆ ಗೌರವ ನೀಡುವ ಕೆಲಸ ಮಾಡಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net