ಕೃಷಿಯಲ್ಲಿ ಯಂತ್ರೋಪಕರಣ, ತಂತ್ರಜ್ಞಾನ ಬಳಸಿ

Boom sprayer demonstration
Published on

ಲಕ್ಷ್ಮೇಶ್ವರ: ಪಟ್ಟಣದ ಯುವ ರೈತ ಮಲ್ಲಿಕಾರ್ಜುನ ಕಳಸಾಪುರ ಅವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ‘ಬಿಜಿಡಿ 111-1’ ತಳಿಯ ಕಡಲೆ ಬೆಳೆಯಲ್ಲಿ ಟ್ರ್ಯಾಕ್ಟರ್ ಚಾಲಿತ ಬೂಮ್ ಸ್ಪ್ರೇಯರ್ ಯಂತ್ರದ ಪ್ರಾತ್ಯಕ್ಷಿಕೆ ಗುರುವಾರ ನಡೆಯಿತು.

ಈ ವೇಳೆ ಮಾತನಾಡಿದ ಉಪಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಅವರು, ಕೃಷಿ ಒಂದು ವಿಜ್ಞಾನವಾಗಿದ್ದು, ರೈತರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ರೈತರು ಕೃಷಿ ಲಾಭದಾಯಕವಾಗಿಸಿಕೊಳ್ಳಲು ಹೊಸ ಆವಿಷ್ಕಾರದ ಯಂತ್ರೋಪಕರಣ, ತಂತ್ರಜ್ಞಾನ, ಹೊಸ ತಳಿ, ಇತ್ತೀಚಿನ ದ್ರವರೂಪದ ಗೊಬ್ಬರ, ಸಸ್ಯ ಸಂರಕ್ಷಣಾ ಔಷಧ ಬಳಕೆ ಮಾಡಿಕೊಳ್ಳಬೇಕು ಎಂದರು.

50 ಕೆಜಿ ಚೀಲದ ಬದಲಾಗಿ ದ್ರವರೂಪದ ಯೂರಿಯಾ, ಡಿಎಪಿ ಇತರ ಪೋಷಕಾಂಶಗಳನ್ನು ನೇರವಾಗಿ ಎಲೆಗಳ ಮೂಲಕ ಬೆಳೆಗಳಿಗೆ ಸಿಂಪಡಣೆ ಮಾಡಬೇಕು. ಇದರಿಂದ ಖರ್ಚು-ವೆಚ್ಚ, ಕೂಲಿ ಸಮಸ್ಯೆ ನಿವಾರಣೆ, ಸಕಾಲಿಕ ಸಿಂಪಡಣೆ ಹಾಗೂ ಸಮಯ ಉಳಿತಾಯದ ಜತೆಗೆ ಉತ್ತಮ ಆದಾಯ ಹೊಂದಬಹುದಾಗಿದೆ. ಅದಕ್ಕಾಗಿ ಕೃಷಿ ಇಲಾಖೆ ಮೂಲಕ ರೈತರಿಗೆ ಸಹಾಯಧನದಲ್ಲಿ ಟ್ರ್ಯಾಕ್ಟರ್‌ಚಾಲಿತ ಬೂಮ್ ಸ್ಪ್ರೇಯರ್ ಯಂತ್ರ ವಿತರಿಸುತ್ತಿದೆ. ಮುಂಬರುವ ದಿನಗಳಲ್ಲಿ ಬೂಮ್ ಸ್ಪ್ರೇಯರ್ ಅನುಕೂಲಕ್ಕಾಗಿ ಟ್ರ್ಯಾಕ್ಟರ್‌ಗೆ ಚಿಕ್ಕದಾದ ಟೈರ್ ಗಾಲಿ ಕೊಡಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಿವೃತ್ತ ಕೃಷಿ ವಿಜ್ಞಾನಿ ಸಂಗನಗೌಡ ಆದಾಪುರ ಮಾತನಾಡಿ, ಕಡಲೆ ಬೆಳೆ ಗದಗ ಜಿಲ್ಲೆಯ ಹಿಂಗಾರಿನ ಸಾಂಪ್ರದಾಯಿಕ ಮತ್ತು ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಎಕರೆಗೆ ಜಿಲ್ಲೆಯ ಸರಾಸರಿ ಇಳುವರಿ ಕೇವಲ ಒಂದೂವರೆ ಕ್ವಿಂಟಾಲ್. ಇದಕ್ಕೆ ಕಾರಣ ಮಣ್ಣಿನಲ್ಲಿ ಸೇರಿಕೊಂಡಿರುವ ಶಿಲೀಂಧ್ರಗಳಿಂದ ಕಡಲೆ ಬೆಳೆಗೆ ಸೊರಗು/ಸಿಡಿ ರೋಗಬಾಧೆ, ವ್ಯತಿರಿಕ್ತ ಹವಾಮಾನ. ಆದ್ದರಿಂದ ಕಡಲೆ ಬೆಳೆಯುವ ರೈತರು ಮಾಗಿ ಉಳುಮೆ, ಮಣ್ಣು ಪರೀಕ್ಷೆ, ಹೊಸ ತಳಿಯ ಬೀಜ, ಕಡ್ಡಾಯ ಬೀಜೋಪಚಾರ, ಬೆಳೆ ಬದಲಾವಣೆಯಂತಹ ಕ್ರಮಗಳನ್ನು ಅನುಸರಿಸಬೇಕು ಎಂದರು.

ಸಹಾಯಕ ಕೃಷಿ ಅಧಿಕಾರಿ ರೇವಣಪ್ಪ ಮನಗೊಳಿ ಮಾತನಾಡಿ, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸ್ವಯಂ ಹಾಗೂ ಖಾಸಗಿ ವ್ಯಕ್ತಿಯಿಂದ ಅವಕಾಶ ಕಲ್ಪಿಸಲಾಗಿದೆ ಎಂದರು.

ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಆತ್ಮಾಯೋಜನೆಯ ಮಹಾಬಲೇಶ್ವರ ಪೂಜಾರ, ದೇವರಾಜ ಅಚಲಕರ, ರೈತ ಮುಖಂಡರಾದ ಪುಲಕೇಶಪ್ಪ ಬಟ್ಟೂರ, ಟಾಕಪ್ಪ ಸಾತಪುತೆ, ಕರಿಯಪ್ಪ ಹುರಕನವರ, ರಮೇಶ ಕೋಳಿವಾಡ, ದಿಳ್ಳೆಪ್ಪ ಉಳ್ಳಟ್ಟಿ, ಬಸವರಾಜ ಕುರಬರ, ನಿಂಗಪ್ಪ ಶಿವಬಸಣ್ಣವರ, ಗಂಗಪ್ಪ ಅಡರಕಟ್ಟಿ, ಸೋಮಶೇಖರ ಜಬಡಿ, ಬಸವರಾಜ ಮೆಣಸಿನಕಾಯಿ, ವಿರೂಪಾಕ್ಷ ಆದಿ, ಬಸವರಾಜ ಅಣ್ಣಿಗೇರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net