

ಮೈಸೂರು: ಪಾರಂಪರಿಕ ದೊಡ್ಡ ಗಡಿಯಾರದ ಕಾಮಗಾರಿಯಲ್ಲಿ ಬೇಸ್‌ಮೆಂಟ್‌ಗೆ ಮಾತ್ರ ಎಂ-ಸ್ಯಾಂಡ್ ಬಳಸಲಾಗಿದ್ದು, ಉಳಿದಂತೆ ಗಾರೆಯನ್ನೇ ಉಪಯೋಗಿಸಲಾಗಿದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಂರಕ್ಷಣಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ದೊಡ್ಡ ಗಡಿಯಾರ ಪಾರಂಪರಿಕವಾಗಿರುವುದರಿಂದ ಅದನ್ನು ಅದಕ್ಕೆ ಅನುಗುಣವಾಗಿಯೇ ಸುಣ್ಣದ ಗಾರೆ, ಮಡ್ಡಿ ಮಾಡಿ ನಿರ್ಮಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಡಿಯಾರದ ಹೊರ ಭಾಗದ ಸುತ್ತಲೂ ಇರುವ ಮಣ್ಣನ್ನು ಇಲಿ ಹೆಗ್ಗಣಗಳು ಬಿಲ ತೆಗೆದು ಮಣ್ಣಿನ ಸಾಮಾರ್ಥ್ಯ ಹಾಳಾಗಿರುತ್ತದೆ. ಅಲ್ಲದೇ ಮಳೆ ನೀರು ತಳಪಾಯಕ್ಕೆ ಹೋಗಿ ತೊಂದರೆ ಉಂಟು ಮಾಡುವ ಸಂಭವ ಇರುತ್ತದೆ. ಹಾಗಾಗಿ ಮೇಲ್ಮಣ್ಣನ್ನು ತೆಗೆದು ಸುತ್ತಲೂ ಜಿಎಸ್‌ಬಿ ಹಾಕಿ ಭದ್ರ ಪಡಿಸಲಾಗಿದೆ. ಮಳೆ ನೀರು ಹೊರ ಹೋಗುವಂತೆ, ಇಲಿ, ಹೆಗ್ಗಣಗಳು ಬಿಲ ತೆಗೆಯದಂತೆ ಮಾಡಲು ಜಲ್ಲಿಯ ಪ್ಲಾಂಗಿಂಗ್ ಕಾಂಕ್ಟ್ರೀಟ್ ಹಾಕಲಾಗಿದೆ ಎಂದು ಹೇಳಿದ್ದಾರೆ.
ನದಿ ಮರಳು ಬಳಸಿದ್ದೇವೆ:
ಆದರೆ ಉಳಿದ ಎಲ್ಲ ಕಾಮಗಾರಿಗೂ ಸುಣ್ಣದ ಮಡ್ಡಿ ಹಾಗೂ ನದಿ ಮರಳನ್ನೇ ಬಳಲಾಗಿದೆ. ಗಡಿಯಾರದ ಗೋಪುರ ಬಿರುಕನ್ನು ಸ್ವಿಚ್ಚಿಂಗ್ ಮೂಲಕ ಭದ್ರ ಪಡಿಸಿ, ಘಂಟೆ ಭಾರಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಕಬ್ಬಿಣದ ಸಲಾಕೆಗಳಿಂದ ಭದ್ರಪಡಿಸಿ ಭಾರ ವಿಭಜನೆಗೊಳ್ಳುವಂತೆ ಮಾಡಿ ಸಂರಕ್ಷಣೆ ಮಾಡಲಾಗುತ್ತಿದೆ. ಸುಣ್ಣದ ಗಾರೆಯಿಂದ ಕಾಮಗಾರಿ ನಡೆಸುತ್ತಿರುವುದರಿಂದ ಯಾವುದೇ ಬಿರುಕು ಕಂಡು ಬರುವುದಿಲ್ಲ ಎಂದು ತಿಳಿಸಿದ್ದಾರೆ.