

ಮಡಿಕೇರಿ: ಜಾತಿ ಮತ್ತು ಆದಾಯ ದೃಢೀಕರಣ ಪತ್ರಗಳಲ್ಲಿ ಕೊಡವರನ್ನು ಕೊಡಗರು ಎಂದು ನಮೂದಿಸದೆ ಕೊಡವರು ಎಂದು ಶಾಸ್ತ್ರೀಯವಾಗಿ ನಮೂದಿಸಲು ಕ್ರಮ ಕೈಗೊಳ್ಳಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಹಾಗೂ ಸಮಾಜ ಕಲ್ಯಾಣ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ತುಳಸಿ ಮದಿನೇನಿರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಆಯೋಗದ ಕಛೇರಿಯಲ್ಲಿ ಜಯಪ್ರಕಾಶ ಹೆಗಡೆ ಹಾಗೂ ವಿಕಾಸಸೌಧದ ಕಛೇರಿಯಲ್ಲಿ ತುಳಸಿ ಮದಿನೇನಿ ಅವರನ್ನು ಭೇಟಿಯಾದ ಅವರು ಕೊಡವರ ಬೇಡಿಕೆಗಳ ಕುರಿತು ಚರ್ಚಿಸಿದರು.
ಸಿಎನ್‌ಸಿ ಬೇಡಿಕೆಯಂತೆ ಡಾ.ದ್ವಾರಕನಾಥ್ ಆಯೋಗದ ವರದಿಯು ಕೊಡವ ಪದ ಬಳಕೆಗೆ ಶಿಫಾರಸ್ಸು ಮಾಡಿತ್ತು. ಅಲ್ಲದೆ ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗೆಜೆಟ್ ಅಧಿಸೂಚನೆಯ ಮೂಲಕ ಎಲ್ಲಾ ದಾಖಲೆಗಳಲ್ಲಿ ಕೊಡವ ಶಾಸ್ತ್ರೀಯ ಪದವನ್ನು ಅಳವಡಿಸುವ ಬಗ್ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಕೋರ್ಟ್ ಶಿಫಾರಸ್ಸಿನಂತೆ ಕೊಡವ ಪದ ಬಳಕೆಯ ಅನು?್ಠಾನ ತ್ವರಿತಗೊಳಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದೇವೆ. ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಸಿ ಎಲ್ಲಾ ಆಡಳಿತಾತ್ಮಕ ಅನುಮತಿಗಳನ್ನು ಪ್ರಾರಂಭಿಸಲು ಮನವಿ ಮಾಡಿದ್ದೇವೆ. ಜಯಪ್ರಕಾಶ ಹೆಗಡೆಯಂತಹ ಪ್ರಾಮಾಣಿಕರ ಪ್ರಯತ್ನದ ಫಲವಾಗಿ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದು ತಿಳಿಸಿದ ಅವರು, ಶೀಘ್ರ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.