

ಮಡಿಕೇರಿ:
ಸರ್ಕಾರಿ ದಾಖಲೆಗಳಲ್ಲಿ ಕೊಡಗರು ಅಥವಾ ಕೊಡವರು ಪದ ಬಳಕೆಗೆ ಬದಲಾಗಿ “ಕೊಡವ” ಎಂದು ಬಳಕೆ ಮಾಡಲು ರಾಜ್ಯ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿರುವುದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸಿಎನ್‌ಸಿ ಮುಖಂಡ ಎನ್.ಯು. ನಾಚಪ್ಪ ಇದು ಸಿಎನ್‌ಸಿ ಹೋರಾಟದ ಫಲವಾಗಿದ್ದು, ಯಶಸ್ಸಿನ ಚಾರಿತ್ರಿಕ ಮೈಲುಗಲ್ಲಾಗಿದೆ ಎಂದಿದ್ದಾರೆ.
“ಕೊಡವ” ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. “ಕೊಡವ” ಎನ್ನುವ ಉಜ್ವಲ ಶಾಸ್ತ್ರೀಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು, ಇದು ಸಿಎನ್‌ಸಿಯ ಮಹತ್ವದ ಮೈಲುಗಲ್ಲಾಗಿದೆ. ಕೊಡವರನ್ನು “ಕೊಡವ” ಎಂದು ನಮೂದಿಸದೆ “ಕೊಡಗರು” ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‌ಸಿ ಸಂಘಟನೆ 2008 ರಿಂದಲೇ ಹೋರಾಟ ಆರಂಭಿಸಿತು. ಕೊಡವರ ಭಾವನೆಯನ್ನು ಅರ್ಥ ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಇಲ್ಲಿಯವರೆಗೆ ಮಾಡಿರಲಿಲ್ಲ.
ಆದರೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕ್ಯಾಬಿನೆಟ್ ಸಭೆಯಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಅನುಮೋದನೆ ದೊರೆತ್ತಿದೆ. ಇದು ನಮಗೆ ಸಿಕ್ಕ ದೊಡ್ಡ ಜಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.