ಬದುಕಿನಲ್ಲಿ ಕನ್ನಡ ಭಾಷೆ ಬಳಕೆ ಅಗತ್ಯ

19Kush05
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್.ಮಹಾಬಲೇಶ್ವರ್ ಭಟ್ ದತ್ತಿನಿಧಿ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್ ಉದ್ಘಾಟಿಸಿದರು. ಕೆ.ಎಸ್.ನಾಗೇಶ್, ವಿ.ಪಿ.ಶಶಿಧರ್, ಎನ್.ಎಂ.ಕುಮಾರ್, ಟಿ.ವಿ.ಶೈಲಾ, ಎಸ್.ನಾಗರಾಜ್, ಕೆ.ವಿ.ಉಮೇಶ್ ಇತರರು ಇದ್ದರು.
Published on

ಕುಶಾಲನಗರ: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದು ಅರ್ಥಹೀನ. ಇದರ ಬದಲಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ನಿತ್ಯ ಜೀವನ ಹಾಗೂ ವ್ಯವಹಾರಗಳಲ್ಲಿ ಬಳಸುವುದು ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮಾಜಿ ಮುಖ್ಯ ವ್ಯವಸ್ಥಾಪಕ, ವೃತ್ತಿ ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಸಲಹೆ ನೀಡಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಹಿತಿ ದಿವಂಗತ ಎನ್.ಮಹಾಬಲ್ಲೇಶ್ವರ ಭಟ್ ಅವರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡದ ಏಳು ಬಿಳುಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.


ಕನ್ನಡ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ. ಭಾಷೆ ಜೀವಂತವಾಗಿರಬೇಕಾದರೆ ಮಾತು ಮತ್ತು ಬರಹ ಎರಡೂ ಪ್ರಮುಖವಾಗಿರಬೇಕು ಎಂದು ಹೇಳಿದ ಅವರು, ಕನ್ನಡದ ಕುರಿತಾದ ಒಲವು ಮತ್ತು ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ ಎಂದರು.
ಒಂದು ಭಾಷೆ ನಾಶವಾದರೆ ಅದನ್ನು ಮಾತನಾಡುವ ಸಮುದಾಯ ಕೂಡ ಕ್ರಮೇಣ ನಾಶವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದ ಅವರು, ಜಗತ್ತಿನಲ್ಲಿ ಪ್ರತಿದಿನವೂ ಕನಿಷ್ಠ 2 ಭಾಷೆಗಳು ನಾಶ ಹೊಂದುತ್ತಿದ್ದು, ಇದಕ್ಕೆ ಕಾರಣ ಆ ಭಾಷೆಯನ್ನು ಬಳಸಲು ಸಾಧ್ಯವಾಗದೆ ಇರುವುದು ಎಂದು ವಿಶ್ಲೇಷಿಸಿದರು.


ಕನ್ನಡ ಬಳಕೆಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಅಚ್ಚಕನ್ನಡದ ಹೆಸರುಗಳನ್ನು ಮಕ್ಕಳಿಗೆ ಇಡಬೇಕು. ಕನ್ನಡದಲ್ಲಿ ಬರೆಯಲು ಮತ್ತು ಓದಲು ಬಾಲ್ಯದಿಂದಲೇ ಕಲಿಸುವುದಲ್ಲದೆ, ಪ್ರತಿದಿನವೂ ಕನ್ನಡ ಪತ್ರಿಕೆಗಳು ಹಾಗೂ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ, ಕನ್ನಡ ಚಲನಚಿತ್ರ ಹಾಗೂ ಕನ್ನಡ ಟಿ.ವಿ. ಚಾನಲ್‌ಗಳನ್ನು ನೋಡುವ ಮೂಲಕ ಕನ್ನಡ ಬಳಕೆ ಕನ್ನಡದ ಬೆಳವಣಿಗೆಯನ್ನು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.


ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಅಪ್ಪಟ ಜೀವನ ಪ್ರೀತಿ ಮಾನವೀಯತೆ, ಸಹಬಾಳ್ವೆ ಕನ್ನಡದ ಜೀವವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಕನ್ನಡ ಭಾಷೆ, ಸಾಹಿತ್ಯದ ಅಂತರಂಗದ ಧ್ವನಿಯಾಗಿದೆ ಎಂದರು.


ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ವಿದ್ಯಾತಪಸ್ವಿಗಳಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಎನ್.ಎಸ್.ಸತೀಶ್ ಮಾತನಾಡಿ, ಕಳೆದ ವರ್ಷದಿಂದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವುದು ಕಡ್ಡಾಯವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಸಾಹಿತಿ ದಿವಂಗತ ಎನ್.ಮಹಾಬಲೇಶ್ವರ ಭಟ್ ಅವರ ಪುತ್ರ ಬಿಳಿಗೇರಿಯ ಕಾಫಿ ಬೆಳೆಗಾರ ಎನ್.ಎಂ.ಕುಮಾರ್ ಮಾತನಾಡಿದರು.


ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮ್‌ಕುಮಾರ್ ದತ್ತಿನಿಧಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.


ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥ ಡಾ.ಎಸ್.ರಂಗನಾಥ್, ಹೇಮಲತಾ, ಸಹನಾ, ಕಸಾಪ ಪದಾಧಿಕಾರಿ ಲೀಲಾಕುಮಾರಿ ತೊಡಿಕಾನ, ಬಿ.ಬಿ.ಸಾವಿತ್ರಿ ಇದ್ದರು.


ಆರ್.ಕೆ.ಬಾಲಚಂದ್ರ ಅವರನ್ನು ತಾಲೂಕು ಕ.ಸಾ.ಪ.ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net