

ನರಗುಂದ: ಕೋರ್ಟ್ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ (ಎಸ್ಡಿಎ) ಸೇವೆ ಸಲ್ಲಿಸುತ್ತಿದ್ದ ನೌಕರ ಸರ್ಕಾರದ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ರೋಣ ಜೆಎಂಎಫ್ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎ.ಆರ್. ಕಲಾಲ ತೀರ್ಪು ನೀಡಿದ್ದಾರೆ.
ನರಗುಂದ ಜೆಎಂಎಫ್ ನ್ಯಾಯಾಲಯದಲ್ಲಿ ಎಸ್ಡಿಎ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಗದಗ ತಾಲೂಕು ಅಡವಿ ಸೋಮಾಪೂರ ಗ್ರಾಮದ ಯಮನೂರಸಾಬ ಮಲ್ಲಿಕಸಾಬ ನದಾಫ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಏನಿದು ಘಟನೆ: ಗದಗ ತಾಲೂಕು ಅಡವಿ ಸೋಮಾಪೂರ ಗ್ರಾಮದ ನಿವಾಸಿ ಯಮನೂರಸಾಬ ನದಾಫ್ 2016-2017ರಲ್ಲಿ ನರಗುಂದ ಜೆಎಂಎಫ್ಸಿ ಕೋರ್ಟ್ನಲ್ಲಿ ಎಸ್ಡಿಎ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆ ಅವಧಿಯಲ್ಲಿ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಕ್ರಮ ಮದ್ಯ ಮರಾಟ ಹಾಗೂ ಮರಳು ಸಾಗಾಟ, ಓಸಿ, ಇಸ್ಪೀಟ್ ಮುಂತಾದ ಅಪರಾಧ ಪ್ರಕರಣಗಳಿಗೆ ವಿಧಿಸಿದ 3.95 ಲಕ್ಷ ರೂಪಾಯಿ ಪ್ರಾಪರ್ಟಿ ಹಣವನ್ನು ರಿಜಿಸ್ಟರ್ ಮೂಲಕ ಸ್ವೀಕರಿಸಿದ್ದನು. ಆದರೆ, ಪೊಲೀಸರಿಂದ ಪ್ರಾಪರ್ಟಿ ರಿಜಿಸ್ಟರ್ ಮೂಲಕ ಸ್ವೀಕರಿಸಿದ ಹಣ ಇಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸ್ವೀಕೃತಿ ಬಗ್ಗೆ ಸಹಿ ಕೂಡ ಪಡೆದುಕೊಳ್ಳದೆ ದಂಡದ ಸಂಪೂರ್ಣ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದನು. ಈ ಕುರಿತು ನರಗುಂದ ಜೆಎಂಎಫ್ಸಿ ನ್ಯಾಯಾಲಯದ ಅಂದಿನ ಶಿರಸ್ತೇದಾರ ವಿ.ಎಫ್. ಕಲಕಂಬಿ ನರಗುಂದ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದೂರು ದಾಖಲಿಸಿದ್ದರು. ಅಂದಿನ ಸಿಪಿಐ ರಮಾಕಾಂತ ವೈ, ಹುಲ್ಲೂರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಶಿವಾನಂದ ಹೂಲಿ, ಹಾಗೂ ರಾಜರಾಜೇಶ್ವರಿ ಅವರು ಸಾಕ್ಷ್ಯಾಧಾರಗಳ ಸಮೇತ ಸುದೀರ್ಘ ವಾದ ಮಂಡನೆ ಮಾಡಿದ್ದರಿಂದ ರೋಣ ಜೆಎಂಎಫ್ ನ್ಯಾಯಾಲಯವು ಯಮನೂರಸಾಬ ನದಾಫ್ಗೆ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದರೆ 4 ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ಸ್ವಂತಕ್ಕೆ ಉಪಯೋಗಿಸಿಕೊಂಡ 3.90 ಲಕ್ಷ ರೂ. ಹಣವನ್ನು 60 ದಿನಗಳೊಳಗಾಗಿ ನರಗುಂದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪಾವತಿಸುವಂತೆ ಆದೇಶಿಸಿದೆ.