ದೇವಳಗಳಲ್ಲಿ ಗೋ ಉತ್ಪನ್ನಗಳ ಬಳಕೆ

Kin_Go-Products
Published on

ವಿಜಯವಾಣಿ ಸುದ್ದಿಜಾಲ ಕಟೀಲು

ದೇಸೀ ಗೋವಿನ ಬಗ್ಗೆ ಕಾಳಜಿ, ಗೋಉತ್ಪನ್ನಗಳ ಬಳಕೆ ಬಗ್ಗೆ ಆಸಕ್ತಿ, ಜಾಗೃತಿ ಹೆಚ್ಚಿಸುವಲ್ಲಿ ಕಟೀಲು ದೇವಸ್ಥಾನದ ಪ್ರಯತ್ನ ಅಭಿನಂದನೀಯ. ಇತರ ದೇವಾಲಯಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಲಿ ಎಂದು ಗೋಮಾತಾ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಡಾ.ಜೀವನ್ ಕುಮಾರ್ ವಿ. ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಾಲ್ಕು ದಿನಗಳ ಕಾಲ ನಡೆದ ಗೋಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ ನಂದಿನೀ ಗವ್ಯಮ್ ಇದರ ಸಮಾರೋಪದಲ್ಲಿ ಮಾತನಾಡಿದರು.

ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇಗುಲದ ಗೋಶಾಲೆಯಲ್ಲೂ ಗೋಉತ್ಪನ್ನಗಳ ತಯಾರಿಕೆಗೆ ಪ್ರಯತ್ನಿಸಲಾಗುವುದು. ಈಗಾಗಲೇ ದೇಗುಲದ ಭೋಜನಶಾಲೆ, ಇತರೆಡೆಗಳ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದ್ದು, ಜನಜಾಗೃತಿ ಹಿನ್ನೆಲೆಯಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದರು. ಗೋಉತ್ಪನ್ನಗಳ ತಯಾರಕರಾದ ಶಿವಪ್ರಸಾದ್ ಕೋಲಾರ, ನಾಗಮೂರ್ತಿ ಮೈಸೂರು ತಮ್ಮ ಅಭಿಪ್ರಾಯ ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿಸಾನ್ ಘಟಕದ ಪುರುಷೋತ್ತಮ ಕೋಟ್ಯಾನ್, ಭುವನಾಭಿರಾಮ ಉಡುಪ, ಕಟೀಲು ಪ್ರೌಢಶಾಲೆ ಉಪಪ್ರಾಚಾರ್ಯ ರಾಜಶೇಖರ ಎನ್. ಮತ್ತಿತರರಿದ್ದರು. ರಾಜ್ಯದ ನಾನಾ ಭಾಗಗಳ ಗೋಶಾಲೆಗಳಿಂದ ಗೋಉತ್ಪನ್ನಗಳ ಮಾರಾಟಗಾರರು ಈ ಮೇಳದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net