ರಸ್ತೆಗುಂಡಿ ಮುಚ್ಚಲು ಇಕೊಫಿಕ್ಸ್ ಮಿಶ್ರಣ ಬಳಕೆ: ಬಿಬಿಎಂಪಿಯಿಂದ ಪ್ರಾಯೋಗಿಕ ಬಳಕೆ

road machine
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ರಸ್ತೆಗುಂಡಿಗಳನ್ನು ಮುಚ್ಚಲು ಪ್ರಾಯೋಗಿಕವಾಗಿ ಇಕೊಫಿಕ್ಸ್ ಮಿಶ್ರಣ ಬಳಕೆ ಮಾಡಲಾಗುತ್ತಿದೆ ಎಂದು ಪಾಲಿಕೆಯ ಪ್ರಧಾನ ಅಭಿಯಂತರ ಬಿ.ಎಸ್.ಪ್ರಹ್ಲಾದ್ ತಿಳಿಸಿದ್ದಾರೆ.

ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ ಸಿಎಸ್‌ಆರ್‌ಐ - ಸಿಆರ್‌ಆರ್‌ಐ, ರಮುಕ ಗ್ಲೋಬಲ್ ಸರ್ವೀಸ್ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಬುಧವಾರ ನಗರದ ಅವೆನ್ಯೂ ರಸ್ತೆಯಲ್ಲಿನ ಆಂಜನೇಯ ದೇಗುಲದ ಬಳಿಯ ಗುಂಡಿಗಳನ್ನು ಮುಚ್ಚುವ ಮೂಲಕ ಹೊಸ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಯಿತು.

ನಗರದ ರಸ್ತೆಗಳು ಮಳೆಗಾಲದಲ್ಲಿ ಹಾಟ್ ಮಿಕ್ಸ್ ಘಟಕ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಪರಿಸರ ಸ್ನೇಹಿ ರೀತಿಯಲ್ಲಿ ಬಾಳಿಕೆ ಬರುವ ರಸ್ತೆ ದುರಸ್ತಿ ಕೈಗೊಳ್ಳಲು ಹೊಸ ತಂತ್ರಜ್ಞಾನವು ವರದಾನವಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದ್ದಾರೆ.

ಇಕೊಫಿಕ್ಸ್ ತಯಾರಿ ಹೇಗೆ?:

ಇಕೊಫಿಕ್ಸ್ ಅನ್ನು ಉಕ್ಕಿನ ಕೈಗಾರಿಕೆಗಳ ಕೈಗಾರಿಕಾ ತ್ಯಾಜ್ಯವನ್ನು (ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್) ಬಳಸಿ ಅಭಿವೃದ್ಧಿಪಡಿಸಲಾಗಿದೆ. ಇದು ಯಾವುದೇ ನಿರ್ಜಲೀಕರಣದ ಅಗತ್ಯವಿಲ್ಲದೆಯೇ ನೀರು ತುಂಬಿದ ಗುಂಡಿಯನ್ನು ಸರಿಪಡಿಸಬಹುದಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಬೇಕಾದರೆ ಗುಂಡಿಗಳನ್ನು ನೀರು ತೆರವು ಮಾಡಿ ಸ್ವಚ್ಛಗೊಳಿಸುವ ಅಗತ್ಯವಿರುತ್ತದೆ. ಆದರೆ, ಇಕೋಫಿಕ್ಸ್ ಮಿಶ್ರಣಕ್ಕೆ ಯಾವುದೇ ಟ್ಯಾಕ್ ಕೋಟ್ ಅಗತ್ಯವಿಲ್ಲದೇ ನೀರು ತುಂಬಿದ ಸ್ಥಿತಿಯಲ್ಲಿಯೂ ಗುಂಡಿ ದುರಸ್ತಿ ಮಾಡಬಹುದಾಗಿದೆ.

ಅನ್ಯ ರಾಜ್ಯಗಳಲ್ಲೂ ಬಳಕೆ:

ಇಕೋಫಿಕ್ಸ್ ಮಿಶ್ರಣದ ತಂತ್ರಜ್ಞಾನವು ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಇದರ ಬಾಳಿಕೆ ಹಾಗೂ ಕಾರ್ಯಕ್ಷಮತೆ ಉತ್ತಮವಾಗಿ ಪರೀಕ್ಷಿಸಲ್ಪಟ್ಟಿದೆ ಎಂದು ಪ್ರಹ್ಲಾದ್ ವಿವರಿಸಿದ್ದಾರೆ.

ಈ ವೇಳೆ ಸಿಎಸ್‌ಐಆರ್‌ನ ಪ್ರಮುಖ ವಿಜ್ಞಾನಿ ಸತೀಶ್ ಪಾಂಡೆ, ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರ ಆರೀಫ್​​ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net