

ಶಿವಮೊಗ್ಗ: ಈ ಬಾರಿ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮ ರಾಜಕೀಯ ವಿಚಾರಗಳಿಗೆ ವೇದಿಕೆಯಾಗಿದ್ದು ದುರದೃಷ್ಟಕರ, ದಸರಾ ಉದ್ಘಾಟಕರೂ ಸೇರಿದಂತೆ ಅನೇಕರು ಸಿಎಂ ಹೊಗಳಿಕೆಗೆ ದಸರಾ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡಿದ್ದು ಖಂಡನೀಯ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಆಕ್ಷೇಪ ವ್ಯಕ್ತಪಡಿಸಿದರು.
ದಸರಾ ಉದ್ಘಾಟಿಸಿದ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ, ಶಾಸಕ ಜಿ.ಟಿ.ದೇವೇಗೌಡ ಮುಂತಾದವರು ಮುಖ್ಯಮಂತ್ರಿಯವರನ್ನು ಹೊಗಳುವ ಜತೆಗೆ ಅನೇಕ ರಾಜಕೀಯ ಸಂಗತಿಗಳನ್ನು ಪ್ರಸ್ತಾಪಿಸಿದರು. ಸಿಎಂ ಕೂಡಾ ಅಧಿಕಾರ ಐದು ವರ್ಷ ಮುಂದುವರಿಯುತ್ತದೆ ಎನ್ನುವ ಮೂಲಕ ಆ ವೇದಿಕೆಯ ಆಶಯಕ್ಕೆ ಭಂಗ ತಂದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದೇವರ ಬಗ್ಗೆ ಎಂದಿಗೂ ನಂಬಿಕೆಯ ಮಾತನ್ನಾಡದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣ ಬಯಲಿಗೆ ಬಂದ ಬಳಿಕ ಆಸಕ್ತರಾಗುತ್ತಿರುವಂತೆ ಕಂಡುಬರುತ್ತಿದೆ. ಮುಡಾ ಹಗರಣದಲ್ಲಿ ನನ್ನ ಪಾತ್ರವೇನಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ, ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಪ್ರವೇಶ ಮಾಡುತ್ತಿದ್ದಂತೆಯೇ ನಿವೇಶನ ಮರಳಿಸುವ ಮೂಲಕ ಪರೋಕ್ಷವಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಸಿಎಂ ನಿವೇಶನ ಹಿಂತಿರುಗಿಸಿದ್ದು ಬಿಜೆಪಿ ಹೋರಾಟಕ್ಕೆ ಸಿಕ್ಕ ಮೊದಲ ಜಯ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಕುಂಠಿತವಾಗಿದೆ. ಸಿಎಂ ರಾಜಿನಾಮೆ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯಿಂದ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ರಾಜ್ಯದಲ್ಲಿ 1.5.ಕೋಟಿ ಸದಸ್ಯತ್ವದ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 40ಲಕ್ಷ ಸದಸ್ಯತ್ವ ನೋಂದಣಿಯಾಗಿದೆ ಎಂದ ಎಸ್.ದತ್ತಾತ್ರಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ ಕೆಲ ಮಂದಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸುವ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕಾರ್ಯರ್ಶಿಗಳಾದ ಜ್ಞಾನೇಶ್ವರ್, ಜಗದೀಶ್, ಶಿವರಾಜ್, ವಿನ್ಸೆಂಟ್, ಪ್ರಮುಖರಾದ ವಿರೂಪಾಕ್ಷಪ್ಪ, ಜಯರಾಮು, ಹೃಷಿಕೇಶ್ ಪೈ, ಚಂದ್ರಶೇಖರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.