

ಹುಬ್ಬಳ್ಳಿ: ಡಿಜೆ ಬಳಕೆ ವಿಷಯವಾಗಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆಯೇ ನಡೆದುಕೊಳ್ಳಬೇಕು. ಕೋರ್ಟ್ ಆದೇಶದ ಮುಂದೆ ಯಾರೂ ದೊಡ್ಡವರಲ್ಲ. ಆದೇಶ ಮೀರಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಹು-ಧಾ ಪೊಲೀಸ್ ಆಯುಕ್ತಾಲಯ ವತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವೇ ಕೆಲವು ಕಿಡಿಗೇಡಿಗಳಿಂದ ಹಬ್ಬದ ಆಚರಣೆಗೆ ಭಂಗವಾಗಬಹುದು. ಅಂಥವರನ್ನು ಈಗಾಗಲೇ ನಾವು ಗಡಿಪಾರು ಮಾಡಿದ್ದೇವೆ. ಇನ್ನಷ್ಟು ರೌಡಿಶೀಟರ್‌ಗಳನ್ನು 3-4 ದಿನಗಳಲ್ಲಿ ಗಡಿಪಾಡು ಮಾಡಲಾಗುವುದು ಎಂದರು.
ಹು-ಧಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಾವು ಈ ಭಾಗದವರು ಇರುವುದರಿಂದ ನಮಗೆ ವಿಶೇಷ ಗೌರವವಿದೆ. ಹಿಂದು-ಮಸ್ಲಿಂ ಭೇದವಿಲ್ಲದೇ ಪರಸ್ಪರ ಸಹಕಾರದಿಂದ ಆಚರಿಸುತ್ತಿರುವುದು ಇಲ್ಲಿಯ ವಿಶೇಷ ಎಂದು ಬಣ್ಣಿಸಿದರು.
ಧಾರವಾಡದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಸೌಹಾರ್ದ ಸಭೆಯನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಕೆಲ ವಿಷಯಗಳ ಚರ್ಚೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಸಲಾಗುವುದು ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತಿಗೆ ಭಂಗ ಬಾರದಂತೆ ಪ್ರತಿಯೊಬ್ಬರೂ ಪೂಜೆ ಸಲ್ಲಿಸಬೇಕು. ಡಿಜೆಗಿಂದ ಮೊದಲು ಡೊಳ್ಳು, ವೀರಗಾಸೆ, ಕರಡಿಮಜಲು, ಚಂಡೆ ವಾದ್ಯ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳನ್ನು ಬಳಕೆ ಮಾಡಲಾಗುತ್ತಿತ್ತು. ಈಗ ಡಿಜೆ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದರು.
ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಹಿಂದು-ಮುಸ್ಲಿಮರು ಸಹೋದರರಂತೆ ಬಾಳುತ್ತಿರುವ ನೆಲ ಹುಬ್ಬಳ್ಳಿ. ಹಿಂದುಗಳ ಹಬ್ಬ ಬಂದಾಗ ಬೇರೆ ಧರ್ಮೀಯರು, ಅವರ ಹಬ್ಬ ಬಂದಾಗ ಹಿಂದು ಧರ್ಮದವರು ಸಹಕಾರ ನೀಡಬೇಕು. ಆದರೆ, ಈ ಬಾರಿಯ ಗಣೇಶೋತ್ಸವಕ್ಕೆ ಡಿಜೆ ಬಳಕೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಡಿಸಿಪಿ ಮಹಾನಿಂಗ ನಂದಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಸ್ಲಿಂ ಧರ್ಮಗುರು ತಾಜುದ್ದೀನ ಖಾದ್ರಿ ಪೀರ, ಕ್ರಿಶ್ವಿಯನ್ ಧರ್ಮಗುರು ಮೆಕ್ಸಿಮ್ ಡಿಸೋಜಾ, ಸಿಖ್ ಧರ್ಮಗುರು ಗ್ಯಾನಿ ಗುರುವಂತ ಸಿಂಗ್, ಗಣೇಶೋತ್ಸವ ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಮಾತನಾಡಿದರು. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಭೆಗೆ ಮಂಡಿಸಿದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಪ್ರಮುಖರಾದ ಶಾಂತರಾಜ ಪೋಳ, ಮಹೇಂದ್ರ ಸಿಂಘಿ, ಅಬ್ದುಲ್ ಖಾದರ್ ಅತ್ತಾರ, ಪ್ರಕಾಶ ಕ್ಯಾರಿಕಟ್ಟಿ, ಗುರುನಾಥ ಉಳ್ಳಿಕಾಶಿ, ಪಾಲಿಕೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಸಂಗೀತಾ ದೇವದಾಸ, ಗುರುನಾಥ ಉಳ್ಳಿಕಾಶಿ, ಪಾಲಿಕೆ ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಶಹರ ತಹಸೀಲ್ದಾರ ಮಹೇಶ ಗಸ್ತೆ, ಅಬಕಾರಿ ಇಲಾಖೆಯ ರಮೇಶಕುಮಾರ ಇತರರು ಇದ್ದರು.