

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ಖಾಸಗಿ ಕಂಪನಿಗಳಲ್ಲಿರುವ ಸಾಮಾಜಿಕ ಹೊಣೆಗಾರಿಕೆಯ ಅನುದಾನ (ಸಿಎಸ್‌ಆರ್) ಇತ್ತೀಚೆಗೆ ಸಮಾಜದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆಯಾಗುತ್ತಿದ್ದು, ಲಯನ್ಸ್ ಕ್ಲಬ್‌ನಂತಹ ಸಂಘ-ಸಂಸ್ಥೆಗಳು ಉತ್ತಮ ಉದ್ದೇಶಗಳಿಗೆ ಈ ಅನುದಾನ ಪಡೆಯುತ್ತಿರುವುದು ಶ್ಲಾಘನೀಯ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ಲಯನ್ಸ್ ಕ್ಲಬ್ ಮೂಲಕ ಸುಪ್ರದಾ ಕನ್ಸ್ಟಕ್ಷನ್ ಕಂಪನಿ ಸಿಎಸ್‌ಆರ್ ಅನುದಾನದಡಿ ಇಲ್ಲಿನ ನಿವೇದಿತಾ ಪ್ರಾಥಮಿಕ ಶಾಲೆಯಲ್ಲಿ 12.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶೌಚಗೃಹವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲವೂ ಸರ್ಕಾರದಿಂದಲೇ ನಡೆಯಲಿ ಎಂಬ ಮನಸ್ಥಿತಿ ಬಿಟ್ಟು ವಿವಿಧ ಕಂಪನಿಗಳಲ್ಲಿರುವ ಸಾಮಾಜಿಕ ಹೊಣೆಗಾರಿಕೆ ಅನುದಾನ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ದಾನಿಗಳ ಸಹಾಯ ಬಳಸಿಕೊಂಡು ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳು ಏಳ್ಗೆ ಕಾಣಬೇಕು. ಈ ಮೂಲಕ ಸಮಾಜದ ಅಭಿವೃದ್ಧಿಗೂ ಕಾರಣರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗಶೆಟ್ಟಿ ಮಾತನಾಡಿ, 1965ರಲ್ಲಿ ಆರಂಭವಾದ ಕ್ಲಬ್ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿದೆ. ಇತ್ತೀಚೆಗೆ ಪರಿಸರ ವಿಷಯವಾಗಿ ಕ್ಲಬ್ ಹೆಚ್ಚು ಕಾರ್ಯೋನ್ಮುಖವಾಗಿದೆ. ಭಾವಿಕಟ್ಟಿ ಪ್ಲಾಟ್ ಸರ್ಕಾರಿ ಶಾಲೆಗೆ 7.5 ಲಕ್ಷ ರೂ. ವೆಚ್ಚದಲ್ಲಿ ಊಟದ ಮನೆ, ಶೌಚಗೃಹ, ಕ್ಲಾಸ್ ರೂಂಗಳನ್ನು ನಿರ್ಮಿಸಲಾಗಿದೆ. ಸಪ್ತಾಪುರದ 12 ನಂಬರ್ ಶಾಲೆಗೆ ಪೂರ್ಣ ಬಣ್ಣ ಹಚ್ಚಲಾಗಿದೆ. 30 ಜನರಿಗೆ ಕೃತಕ ಕಾಲು ಜೋಡಣೆ, 25 ಜನರಿಗೆ ಕಣ್ಣಿನ ಚಿಕಿತ್ಸೆ ಮಾಡಿಸಲಾಗಿದೆ. ಪರಿಸರ ದಿನ ಮಾತ್ರವಲ್ಲದೆ ವರ್ಷದಲ್ಲಿ 100 ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಕ್ಲಬ್ ಕಾರ್ಯವಾಗಿದೆ ಎಂದರು.
ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಶ್ರೀಧರ ನಾಡಗೀರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಕ್ಲಬ್ ಪ್ರಾದೇಶಿಕ ಅಧ್ಯಕ್ಷೆ ಆರತಿ ಕಮಲಾಪುರ, ಕಾರ್ಯದರ್ಶಿ ಆನಂದ ಕಮಲಾಪುರ, ಪದಾಧಿಕಾರಿಗಳಾದ ಗುರುರಾಜ ಪಿಸೆ, ವಿದ್ಯಾಧರ ಅಂಗಡಿ, ಡಾ. ಅನಿರುದ್ಧ ಕುಲಕರ್ಣಿ, ರಾಜು ಪಾಟೀಲ ಕುಲಕರ್ಣಿ, ಶೈಲಾ ಕರಗುದರಿ, ಉಷಾ ಗದ್ಗಿಮಠ, ಅಶ್ವಿನ್ ಕೊಪ್ಪಿಕರ, ವೃಷಭ ಕರೋಲೆ, ಇತರರು ಇದ್ದರು.