

ಕೊಳ್ಳೇಗಾಲ: ರಾಜ್ಯ ಸರ್ಕಾರ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಿ ತೆರಿಗೆ ಸಂಗ್ರಹಿಸುತ್ತಿದೆ. ಇದರಿಂದ ನಿಮ್ಮ ಆಸ್ತಿ ಅಧಿಕತೃವಾಗುವುದಿಲ್ಲ ಅನಧಿಕೃತವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಬಿ ಖಾತೆಯಿಂದ ಅನನುಕೂಲವೇ ಹೆಚ್ಚಾಗಿದೆ. ಈ ಖಾತೆಯಿಂದ ಮನೆ ಕಟ್ಟಲು ಲೈಸೆನ್ಸ್, ಲೋನ್ ಸಿಗುವುದಿಲ್ಲ. ಆಸ್ತಿ ಮಾಲೀಕರು ತಾವೇ ತಮ್ಮ ಆಸ್ತಿಯನ್ನು ಅನಧಿಕೃತ ಎಂದು ಘೋಷಿಸಿಕೊಂಡಂತೆ ಆಗುತ್ತದೆ. ಬಿ ಖಾತೆ ಆಸ್ತಿಗಳನ್ನು ತೆರಿಗೆ ವಸೂಲಾತಿಗೆ ಮಾತ್ರ ಒಳಪಡಿಸಿದ್ದು ಇದ್ದರಿಂದ ಅಧಿಕೃತ ಆಸ್ತಿ ಆಗುವುದಿಲ್ಲ. ಮಾಲೀಕತ್ವ ದೃಢೀಕರಿಸಲು ಸಾಧ್ಯವಿಲ್ಲ. ಆಸ್ತಿಯ ಮಾಲೀಕರಿಗೆ ಮುಂದೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಮಾರುಕಟ್ಟೆಯ ಮೌಲ್ಯ ಕಡಿಮೆ ಆಗುತ್ತದೆ ಎಂದು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ ಖಾತೆ ಯೋಜನೆಯನ್ನು ನಾನು ವಿರೋಧಿಸುತ್ತಿಲ್ಲ. ಜನರು ಎರಡಲ್ಲ ಮೂರು ಪಟ್ಟು ತೆರಿಗೆ ಕಟ್ಟುತ್ತಾರೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ ಅಧಿಕೃತವಾಗಿ ಎ ಖಾತೆ ನೀಡಲಿ, ಜನ ವಿರೋಧಿ ಯೋಜನೆ ಬಗ್ಗೆ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ಧ್ವನಿ ಎತ್ತಲಿದೆ ಎಂದರು.
2025-26 ನೇ ಸಾಲಿನ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಹಣ ಗಳಿಕೆಗೆ ಬಿ ಖಾತೆ ಅಭಿಯಾನದ ವಾಮಮಾರ್ಗವನ್ನು ರಾಜ್ಯ ಸರ್ಕಾರ ಹಿಡಿದಿದೆ. ಈಗಾಗಲೇ ಎಸ್‌ಇಪಿ ಹಾಗೂ ಟಿಎಸ್‌ಪಿ ಹಣ ದುರ್ಬಳಕೆ ಆಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದೀಗ ಅನಧಿಕೃತ ಬಡಾವಣೆಯಲ್ಲಿರುವ ಆಸ್ತಿಗಳ ಮಾಲೀಕರನ್ನು ಪ್ರೇರೆಪಿಸಿ ಕಂದಾಯ ಕಟ್ಟಿಸಿಕೊಂಡು ಗ್ಯಾರಂಟಿ ಯೋಜನೆ ಪೂರೈಸುವ ಕುತಂತ್ರ ಮಾಡಲಾಗಿದೆ ಎಂದು ಆರೋಪಿಸಿದರು.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಲಾಗಿತ್ತು. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಅನಧಿಕೃತ ಆಸ್ತಿಗಳಿಗೆ ಅಧಿಕೃತಗೊಳಿಸಲು ಏನೇನು ಪ್ಯಾರಾಮೀಟರ್ಸ್ ಅಳವಡಿಸಬೇಕಿದೆ ಎಂಬ ಬಗ್ಗೆ ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿತ್ತು. ನಂತರ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ಎನ್.ಮಹೇಶ್ ಹೇಳಿದರು.
ಇದೀಗ ಕಾಂಗ್ರೆಸ್ ಸರ್ಕಾರ ಅನಧಿಕೃತ ಅಸ್ತಿಗಳಿಗೆ ತೆರಿಗೆ ಕಟ್ಟಿಸಿಕೊಂಡು ಬಿ ಖಾತೆ ನೀಡಿ ಅಧಿಕೃತಗೊಳಿಸುತ್ತೇವೆ ಎಂಬ ಗ್ರಹಿಕೆಯನ್ನು ಹುಟ್ಟುಹಾಕಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 54,91,269 ಆಸ್ತಿಗಳಿವೆ. ಈ ಪೈಕಿ ಅಧಿಕೃತವಾಗಿ 20,55,668, ಅನಧಿಕೃತವಾಗಿ 34,35,601 ಆಸ್ತಿಗಳಿವೆ. ಇದರಲ್ಲಿ 33,68,852 ವಸತಿ ಆಸ್ತಿಗಳು, 4,40,666 ವಾಣಿಜ್ಯ ಆಸ್ತಿಗಳು, 29,978 ಕೈಗಾರಿಕಾ ಆಸ್ತಿಗಳು, 16,17,512 ಖಾಲಿ ನಿವೇಶನಗಳ ಆಸ್ತಿಗಳಿವೆ. ಗ್ರಾಮೀಣ ಪ್ರದೇಶದ 1.40 ಕೋಟಿ ಆಸ್ತಿಗಳಿವೆ. ಅದರಲ್ಲಿ 96 ಲಕ್ಷ ಅನಧಿಕೃತ ಆಸ್ತಿಗಳಿವೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 5,320, ಚಾಮರಾಜನಗರದಲ್ಲಿ 4,500 ಅನಧಿಕೃತ ಆಸ್ತಿಗಳಿವೆ. ಆರು ವರ್ಷದ ಹಿಂದಿನ ತೆರಿಗೆ ಕಟ್ಟಿಸಿಕೊಂಡು ಬಿ ಖಾತೆ ನೀಡುವ ಬದಲು ಎ ಖಾತೆ ನೀಡಬೇಕೇಂದು ಒತ್ತಾಯಿಸಿದರು.
ಮಾಜಿ ಶಾಸಕ ಎಸ್.ಬಾಲರಾಜು, ನಗರಸಭೆ ಸದಸ್ಯ ಚಿಂತು ಪರಮೇಶ್, ಬಿಜೆಪಿ ಟೌನ್ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಮುಖಂಡ ಸೋಮಣ್ಣ, ಕೆ.ಕೆ ಮೂರ್ತಿ, ಮಧುಚಂದ್ರ, ಸೋಮಣ್ಣ ಉಪ್ಪಾರ್ ಇದ್ದರು.