

ಮೈಸೂರು: ಶ್ರವಣ ಸಾಧನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ ತಂತ್ರಜ್ಞಾನ) ಹಾಗೂ ಮೆಷಿನ್ ಲರ್ನಿಂಗ್ ಕ್ರಾಂತಿಯನ್ನು ಉಂಟು ಮಾಡುತ್ತಿದ್ದು, ಶ್ರವಣದೋಷ ಸಮಸ್ಯೆ ಎದುರಿಸುತ್ತಿರುವವರಿಗೆ ನೂತನ ತಂತ್ರಜ್ಞಾನಗಳು ವರದಾನವಾಗುತ್ತಿದೆ ಎಂದು ಇನ್ಫೋಸಿಸ್ ಸೀನಿಯರ್ ಇಂಜಿನಿಯರಿಂಗ್ ಮ್ಯಾನೇಜರ್ ಪ್ರಕಾಶ್ ದುರೈರಾಜ್ ಹೇಳಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶುಕ್ರವಾರ ‘ಸಹಾಯಕ ತಂತ್ರಜ್ಞಾನ’ ವಿಷಯದ ಕುರಿತು ಆಯೋಜಿಸಿದ್ದ ಹ್ಯಾಕಥಾನ್‌ನಲ್ಲಿ ಮಾತನಾಡಿ, ಎಐ ಶ್ರವಣ ಸಾಧನವು ಶಬ್ದಗಳನ್ನು ವಿಶ್ಲೇಷಿಸಲು ಮತ್ತು ಪ್ರಕ್ರಿಯೆಗೊಳಿಸಲು ಸುಧಾರಿತ ಅಲ್ಗಾರಿದಮ್‌ಗಳನ್ನು ಬಳಸುತ್ತವೆ. ಈ ಸಾಧನವು ಹಿನ್ನೆಲೆ ಶಬ್ದ (ಬ್ಯಾಕ್‌ಗ್ರೌಂಡ್ ನೋಯ್ಸ)ವನ್ನು ಪ್ರತ್ಯೇಕಿಸುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಬಳಕೆದಾರರ ಆದ್ಯತೆಗಳ ಆಧಾರದ ಮೇಲೆ ಧ್ವನಿ ಪ್ರೊಫೈಲ್‌ಗಳನ್ನು ವೈಯಕ್ತೀಕರಿಸಲು ನೆರವು ನೀಡುತ್ತದೆ ಎಂದರು.
ಎಐ ಆಧಾರಿತ ಅಟೋಮೆಟಿಕ್ ಸ್ಪೀಚ್ ರೆಕಗೈನೇಜಷನ್ ಸಿಸ್ಟಮ್ ಮಾತನ್ನು ಅಕ್ಷರವಾಗಿ ಪರಿವರ್ತಿಸಿ ನೀಡುತ್ತದೆ. ಇದು ಶ್ರವಣ ದೋಷ ಸಮಸ್ಯೆ ಎದುರಿಸುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸೆಸಿಂಗ್ ತಂತ್ರಜ್ಞಾನವು ಭಾಷೆಯನ್ನು ಅರ್ಥಮಾಡಿಸಿಕೊಡಲು ನೆರವು ನೀಡುತ್ತದೆ. ಅದೇ ರೀತಿ ಎಐ ಆಧರಿತ ಸಂಕೇತ ಭಾಷೆಯ ಸಿಸ್ಟಮ್‌ನಿಂದ ಸಂಕೇತ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಆ ಮಾತನ್ನು ಅಕ್ಷರ ರೂಪದಲ್ಲಿ ನೀಡಿ ಸಹಕರಿಸುತ್ತದೆ. ಈ ಎಲ್ಲ ತಂತ್ರಜ್ಞಾನಗಳು ಶ್ರವಣ ದೋಷ ಎದುರಿಸುತ್ತಿರುವವರ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಆಯಿಷ್ ಪ್ರಭಾರ ನಿರ್ದೇಶಕಿ ಡಾ.ಪಿ. ಮಂಜುಳಾ ಮಾತನಾಡಿ, ಶ್ರವಣದೋಷ ಎದುರಿಸುತ್ತಿರುವವರು ದೈನಂದಿನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಸಂಕೇತ ಭಾಷೆಗಳು ಇವರ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಶ್ರವಣದೋಷ ಸಮಸ್ಯೆ ಎದುರಿಸುತ್ತಿರುವವರ ಜೀವನಮಟ್ಟ ಸುಧಾರಿಸಲು ಸಾಕಷ್ಟು ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗೂಗಲ್ ಸೀನಿಯರ್ ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್ ಡಿ.ಜೆ. ಹರ್ಷ, ಕಾರ್ಯಕ್ರಮ ಸಂಯೋಜಕರಾದ ಎಸ್. ಕಾರ್ತಿಕ್ ವೆಂಕಟ್, ಡಾ.ಅಜೀಜ್ ಕೆ. ಅಬ್ರಹಾಂ ಇದ್ದರು.