ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಾಧುನಿಕ ಯಂತ್ರದಿಂದ ಉಪಯೋಗ

h30-KMCRI
Published on

ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಾಧುನಿಕ ಯಂತ್ರೋಪಕರಣಗಳು ಬರುತ್ತಿವೆ. ಡಿಜಿಪ್ಲಾ 90 ಥೆರಾಪೆಟಿಕ್ ಪ್ಲಾಸ್ಮಾ ಎಕ್ಸ್‌ಚೇಂಜ್ ಯಂತ್ರವು ಕೆಟ್ಟ ಪ್ಲಾಸ್ಮಾವನ್ನು ಬೇರ್ಪಡಿಸಿ ಉತ್ತಮ ಪ್ಲಾಸ್ಮಾವನ್ನು ದೇಹದಲ್ಲಿರಿಸುವ ಕೆಲಸ ಮಾಡುತ್ತದೆ ಎಂದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್)ಯಡಿ ಇಲ್ಲಿಯ ಕೆಎಂಸಿಆರ್‌ಐಗೆ 30 ಲಕ್ಷ ರೂ. ವೆಚ್ಚದ ಡಿಜಿಪ್ಲಾ 90 ಥೆರಾಪೆಟಿಕ್ ಪ್ಲಾಸ್ಮಾ ಎಕ್ಸ್‌ಚೇಂಜ್ ಮಿಷಿನ್ ಸೋಮವಾರ ವಿತರಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳು ಸಹಕಾರಿಯಾಗಿವೆ ಎಂದರು.

ಭಾರತೀಯ ವೈದ್ಯರು ಹಾಗೂ ಶುಶ್ರೂಷಕರಿಗೆ ವಿಶ್ವದಲ್ಲಿ ಬಹಳ ಬೇಡಿಕೆ ಇದೆ. ಹಿಂದಿನ ಕೇಂದ್ರ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಕಿಮ್ಸ್‌ಗೆ ಬರುವ ಜನರು ಬಡವರಿರುತ್ತಾರೆ. ಅವರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ವಿವಿಧ ವೈದ್ಯಕೀಯ ಪರಿಕರಿಗಳನ್ನು ನೀಡಿವೆ. ಅದೇ ರೀತಿ ಆ ಪರಿಕರಗಳಿಂದ ಎಷ್ಟು ಜನ ರೋಗಿಗಳಿಗೆ ಸಹಕಾರಿಯಾಗಿದ್ದರ ಸಂಖ್ಯೆಯನ್ನು ನೀವು ಇಟ್ಟುಕೊಳ್ಳಬೇಕೆಂದು ಹೇಳಿದರು.

ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಉದ್ಯಮಿ ಎಚ್.ಎನ್. ನಂದಕುಮಾರ, ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಸಿಎಒ ಎಂ.ಎಸ್. ಕಳಸದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಡಾ. ಅಮೃತ, ಡಾ. ರಾಜಶೇಖರ ದ್ಯಾಬೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net