ನಗರಸಭೆ ಅನುದಾನ ಖಾಸಗಿ ಬಡಾವಣೆಗೆ ಬಳಕೆ, ಜಿಲ್ಲಾಡಳಿತಕ್ಕೆ ದೂರು

6CBP4
Published on

ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯಲ್ಲಿ ಅನುದಾನ ಮಂಜೂರಾತಿ ತಾರತಮ್ಯ, ಸ್ಥಗಿತಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಆಡಳಿತ ವ್ಯವಸ್ಥೆಯ ಸುಧಾರಣೆಗೆ ನಗರಸಭಾ ಸದಸ್ಯರ ನಿಯೋಗವು ಒತ್ತಾಯಿಸಿದೆ.

ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್​.ಆನಂದರೆಡ್ಡಿ ಬಾಬು, ನಗರಸಭೆ ಸದಸ್ಯರಾದ ಎಸ್​.ಎಂ. ರಫೀಕ್​, ಜೆ.ನಾಗರಾಜ್​, ನರಸಿಂಹಮೂರ್ತಿ, ಸತೀಶ್​, ಎ.ಬಿ.ಮಂಜುನಾಥ್​, ಯತೀಶ್​, ಜಾಫರ್​, ಮುಖಂಡರಾದ ಮುನಿರಾಜ್​, ಶಶಿಶೇಖರ್​ರನ್ನೊಳಗೊಂಡ ನಿಯೋಗವು ಜಿಲ್ಲಾಡಳಿತ ಭವನದಲ್ಲಿ ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು ನಗರದ ವಿವಿಧ ವಾರ್ಡುಗಳಲ್ಲಾಗಬೇಕಾದ ಕಾಮಗಾರಿಗಳ ಪಟ್ಟಿಯನ್ನು ಸ್ವೀಕರಿಸಲಾಗುವುದು. ಅವೈಜ್ಞಾನಿಕ ಕ್ರಿಯಾಯೋಜನೆ ರದ್ದುಪಡಿಸಿ, ಹೊಸದನ್ನು ಸಿದ್ಧಪಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.

* ನಿಯೋಗ ಆರೋಪಗಳೇನು?

ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿಗಾಗಿ ಬಂದಿರುವ ಅನುದಾನವನ್ನು ಅವೈಜ್ಞಾನಿಕವಾಗಿ ಒಂದೇ ವಾರ್ಡಿಗೆ ನೀಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

2024-25ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ 3.27 ಕೋಟಿ ರೂ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದ್ದು ಇದರಲ್ಲಿ 1.3 ಕೋಟಿ ರೂಗಳನ್ನು ಒಂದೇ ವಾರ್ಡಿಗೆ ನೀಡಲಾಗಿದೆ. ಅದರಲ್ಲೂ 4ನೇ ವಾರ್ಡಿನಲ್ಲಿರುವ ಖಾಸಗಿ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಉಳಿದಂತೆ 30 ವಾರ್ಡುಗಳಿಗೆ ಸಮರ್ಪಕ ಅನುದಾನವೇ ಸಿಗದಂತಾಗಿದೆ. ಈ ಧೋರಣೆಯ ನಗರಸಭೆ ಆಯುಕ್ತರ ಕ್ರಮ ಖಂಡನೀಯ. ಕೂಡಲೇ ಅವೈಜ್ಞಾನಿಕ ಕ್ರಿಯಾಯೋಜನೆಯನ್ನು ರದ್ದು ಪಡಿಸಲು ಒತ್ತಾಯಿಸಲಾಗಿದೆ.

*ನಗರದಲ್ಲಿ ಅಭಿವೃದ್ಧಿ ಕುಂಠಿತ

ಕಳೆದ ಒಂದು ವರ್ಷದಿಂದ ನಗರಸಭೆಗೆ ಯಾವುದೇ ಅನುದಾನ ಬಾರದೇ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ಇದರಿಂದ ವಾರ್ಡಿನ ಜನರ ಬಳಿಗೆ ತೆರಳಲು ಸದಸ್ಯರು ಮುಜುಗರ ಅನುಭವಿಸುವಂತಾಗಿದೆ. ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ವಿವಿಧ ಕಾಮಗಾರಿಗಳ ನಿರ್ವಹಣೆ, ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

*ಸ್ಮಶಾನಕ್ಕೆ ಜಾಗ ನೀಡಿ

ಚಿಕ್ಕಬಳ್ಳಾಪುರದಲ್ಲಿರುವ ಸ್ಮಶಾನಗಳು ಬಹುತೇಕ ಸಮಾಧಿಗಳಿಂದ ಭರ್ತಿಯಾಗಿದ್ದು ಅಂತ್ಯ ಸಂಸ್ಕಾರಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಇದರ ಅರಿವಿದ್ದರೂ ಜಿಲ್ಲಾಡಳಿತ ಇಲ್ಲವೇ ಸ್ಥಳಿಯ ಜನಪ್ರತಿನಿಧಿಗಳಾಗಲೀ ಪರ್ಯಾಯ ವ್ಯವಸ್ಥೆ ಕೈಗೊಂಡಿಲ್ಲ. ಈಗಲಾದರೂ ನಗರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಕನಿಷ್ಠ 2 ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡಬೇಕು ಎಂದು 5 ನೇ ವಾರ್ಡಿನ ನಗರಸಭೆ ಸದಸ್ಯ ಜೆ.ನಾಗರಾಜ್​ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net