ಅಪೌಷ್ಟಿಕತೆ ದೂರವಾಗಿಸಲು ತರಕಾರಿ, ಸೊಪ್ಪು ಹೆಚ್ಚಾಗಿ ಬಳಸಿ

n food
ಎನ್.ಆರ್.ಪುರದ ಇಂದಿರಾನಗರ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಅನ್ನಪ್ರಾಶನ ಕಾರ್ಯಕ್ರಮವನ್ನು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಉದ್ಘಾಟಿಸಿದರು. ಹರೀಶ್ ಶೆಟ್ಟಿ, ಮಂಜುಳಾ, ಪಿ.ಪಿ.ಬೇಬಿ,ರತ್ನಾ, ಶಿವರತ್ನಾ ಇತರರಿದ್ದರು.
Published on

ಎನ್.ಆರ್.ಪುರ: ಗರ್ಭಿಣಿಯರು, ಮಕ್ಕಳು, ಹದಿಹರಿಯದವರಲ್ಲಿ ಅಪೌಷ್ಟಿಕತೆಯಿಂದ ರಕ್ತ ಹೀನತೆ ಕಾಣಿಸಿಕೊಳ್ಳುತ್ತಿದೆ. ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಸರ್ಕಾರ ನೀಡುವ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಂತರಾಗಬೇಕು ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆ, ನಾಗಲಾಪುರ ಗ್ರಾಪಂ ಆಶ್ರಯದಲ್ಲಿ ಶುಕ್ರವಾರ ಇಂದಿರಾನಗರ ಅಂಗನವಾಡಿಯಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಅನ್ನಪ್ರಾಶನ ಕಾರ್ಯಕ್ರಮದಲ್ಲಿ ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹೋಗಲಾಡಿಸೋಣ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ಸೆ.1ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಸೆಪ್ಟೆಂಬರ್‌ನ್ನು ಪೋಷಣ್ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಗರ್ಭಿಣಿ, ಬಾಣಂತಿ, ಹದಿಹರೆಯದವರು ರಕ್ತಹೀನತೆಯಿಂದ ಬಳಲುವುದನ್ನು ತಡೆಗಟ್ಟಲು ಮಗುವಿನ ಮೊದಲ 1000 ದಿನಗಳು ನೈರ್ಮಲ್ಯತೆ ಪೌಷ್ಟಿಕ ಆಹಾರ ಎಂಬ ಅಂಶಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಎಲ್ಲರೂ ಪ್ರೋಟೀನ್, ವಿಟಮಿನ್, ಮಿನರಲ್ಸ್, ನಾರಿನಾಂಶವಿರುವ ಪೌಷ್ಟಿಕ ಆಹಾರ ಸೇವಿಸಬೇಕು. ಆಹಾರ ಪದಾರ್ಥ ವೈಜ್ಞ್ಞಾನಿಕವಾಗಿ ತಯಾರಿಸಿ ಸೇವಿಸುವುದು ಅಗತ್ಯ. ನವಜಾತ ಶಿಶುವಿಗೆ ಆರು ತಿಂಗಳವರೆಗೆ ತಾಯಿಹಾಲು ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರ ಜತೆಗೆ ಎರಡು ವರ್ಷದವರೆಗೆ ತಾಯಿಹಾಲು ನೀಡಬೇಕು. ಹದಿಹರೆಯದವರಿಗೆ ಕಬ್ಬಿಣದಾಂಶದ ಆಹಾರ, ವಯಸ್ಕರಿಗೆ ಕ್ಯಾಲ್ಸಿಯಂಯುಕ್ತ ಆಹಾರ, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದರ ಮೂಲಕ ಅಪೌಷ್ಟಿಕತೆ ತೊಲಗಿಸಬೇಕು ಎಂದು ಸಲಹೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ರತ್ನಾ, ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಪಿಡಿಒ ಮಂಜುಳಾ, ಆಶಾ ಮೇಲ್ವಿಚಾರಕಿ ಪೂರ್ಣಾವತಿ, ಮಧುಮಾಲತಿ, ಶಿವರತ್ನಾ, ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net