

ಹಾಸನ: ಹಾಸನ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ತಡವಾಗಿ ಮಳೆ ಪ್ರಾರಂಭಗೊಂಡಿದ್ದು, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಕೊರತೆಯ ನಡುವೆಯೂ ಉತ್ತಮ ಇಳುವರಿ ಪಡೆಯಲು ರೈತ ಬಾಂಧವರು ಸಮಗ್ರ ಪೋಷಕಾಂಶ ನಿರ್ವಹಣೆಯ ಬಗ್ಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಶಿಫಾರಸ್ಸಿನ ಪ್ರಮಾಣದ ರಾಸಾಯನಿಕ ಗೊಬ್ಬರವನ್ನು ಬಳಸುವಂತೆ ಜಂಟಿ ಕೃಷಿ ನಿರ್ದೇಶಕರಾದ ರಾಜಾ ಸುಲೋಚನಾ ತಿಳಿಸಿದ್ದಾರೆ.
ಭತ್ತಕ್ಕೆ ಶಿಫಾರಸ್ಸು ಮಾಡಿರುವಂತೆ 40 ಕಿ.ಗ್ರಾಂ ಸಾರಜನಕ, 20 ಕಿ.ಗ್ರಾಂ, ರಂಜಕ ಮತ್ತು 20 ಕಿ.ಗ್ರಾಂ, ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಶೇ.50ರಷ್ಟು ಸಾರಜನಕ, ಪೂರ್ತಿ ರಂಜಕ ಹಾಗೂ ಪೊಟ್ಯಾಷ್ ಗೊಬ್ಬರಗಳನ್ನು ನಾಟಿ ಸಮಯದಲ್ಲಿ ಒದಗಿಸುವುದು. ನಂತರ ಶೇ. 25ರಷ್ಟು ಸಾರಜನಕವನ್ನು ನಾಟಿ ಮಾಡಿದ 25-30 ದಿನಗಳಲ್ಲಿ ಹಾಗೂ ಇನ್ನುಳಿದ ಶೇ. 25ರಷ್ಟು ಸಾರಜನಕವನ್ನು ನಾಟಿ ಮಾಡಿದ 50-60 ದಿನಗಳಲ್ಲಿ ಮೇಲುಗೊಬ್ಬರವಾಗಿ ಕೊಡಬಹುದು. ಅದೇ ರೀತಿ, ರಾಗಿಯಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಸಾರಜನಕ 10 ಕಿ.ಗಾಂ್ರ, ರಂಜಕ 15 ಕಿ.ಗಾಂ್ರ, ಹಾಗೂ ಪೋಟ್ಯಾಷ್ 16 ಕಿ.ಗಾಂ್ರ, ಈ ಮೂರು ರಸಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಕೊಡಬೇಕು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಿತ್ತನೆ ಮಾಡಿದ 6-7 ವಾರಗಳ ನಂತರ 10 ಕಿ.ಗಾಂ್ರ. ಸಾರಜನಕ ಒದಗಿಸುವ ಗೊಬ್ಬರಗಳನ್ನು ಮೇಲುಗೊಬ್ಬರವಾಗಿ ಕೊಡುವುದು. ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ಬೆಳೆಗಳಿಗೆ ಸಾರಜನಕ ಒದಗಿಸುವ ದ್ರವರೂಪದ ನ್ಯಾನೋ ಯೂರಿಯಾ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರೈತಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ದ್ವಿದಳ ಧಾನ್ಯದ ಬೆಳೆಗಳಾದ ತೊಗರಿ, ಅಲಸಂದೆ, ಅವರೆ ಇತ್ಯಾದಿ ಕಾಳಿನ ಬೆಳೆಗಳಲ್ಲಿ ಸಾರಜನಕ ಮೇಲುಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ತರಕಾರಿ ಮತ್ತು ತೋಟದ ಬೆಳೆಗಳಲ್ಲಿ ಯೂರಿಯಾ ಬದಲು ಇತರೆ ಸಾರಜನಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ, ಅಮೋನಿಯಂ ಸಲ್ಫೇಟ್ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಬಳಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಯೂರಿಯಾ ರಸಗೊಬ್ಬರವನ್ನು ಬೆಳೆಗಳ ಅವಶ್ಯಕತೆಗಿಂತ ಹೆಚ್ಚು ಬಳಸಿದ್ದೇ ಆದರೆ ಬೆಳೆಗಳಲ್ಲಿ ಕೀಟ ಮತ್ತು ರೋಗದ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ಹೆಚ್ಚು ಯೂರಿಯಾ ಬಳಕೆಯಿಂದ ಬೆಳೆಯಲ್ಲಿ ಬೆಳವಣಿಗೆ ಹಂತದಲ್ಲಿ ಸಸಿಗಳು ಎತ್ತರವಾಗಿ ಬೆಳೆದು ಕಟಾವಿನ ವೇಳೆಗೆ ನೆಲದ ಮೇಲೆ ಬೀಳುವುದರಿಂದ ಕಟಾವಿಗೆ ಸಮಸ್ಯೆಯಾಗುತ್ತದೆ ಹಾಗೂ ಕಾಳಿನ ಗುಣಮಟ್ಟ ಕುಂಠಿತವಾಗುತ್ತದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಭೇಟಿ ಮಾಡಿ ಮಣ್ಣು ಪರೀಕ್ಷೆ ಆಧಾರಿತ ಸಮಗ್ರ ಪೋಷಕಾಂಶ ನಿರ್ವಹಣೆಗೆ ಮಾಹಿತಿ ಪಡೆಯಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ಯೂರಿಯಾ ಬಳಕೆಯನ್ನು ಮಿತಗೊಳಿಸಲು ಸಾರಜನಕ ಒದಗಿಸುವ ವಿವಿಧ ಪರ್ಯಾಯ ಮೂಲಗಳನ್ನು ಹೆಚ್ಚು ಬಳಸುವುದರಿಂದ ಸಾರಜನಕ ಒದಗಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಅವುಗಳಲ್ಲಿ ಪ್ರಮುಖವಾಗಿ ಸಾವಯವ ಮೂಲದಿಂದ ಸಾರಜನಕ ಒದಗಿಸುವ ಸಾವಯವ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಎರೆಗೊಬ್ಬರ ಹಾಗೂ ಹಸಿರೆಲೆ ಗೊಬ್ಬರದ ಬೆಳೆಗಳಾದ ಅಪ್ಸೆಣಬು, ಅಲಸಂದೆ, ಹುರುಳಿ ಇತ್ಯಾದಿಗಳನ್ನು ಬೆಳೆದು ಮಣ್ಣಿಗೆ ಸೇರಿಸುವುದರಿಂದ ಬೆಳೆಗಳಿಗೆ ಶೇ.25 ರಿಂದ 30 ರಷ್ಟು ಸಾರಜನಕವನ್ನು ಒದಗಿಸಬಹುದು. ಹೆಚ್ಚಿನ ತಾಂತ್ರಿಕ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ರಾಜಾ ಸುಲೋಚನಾ ಅವರು ತಿಳಿಸಿದ್ದಾರೆ.