

ದೊಡ್ಡಬಳ್ಳಾಪುರ: ಸಿರಿಧಾನ್ಯಗಳ ಬಳಕೆ ಉತ್ತಮ ಆರೋಗ್ಯಕ್ಕೆ ರಹದಾರಿ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ ಎಂಬ ಮ್ಯಾರಥಾನ್ಗೆ ಪ್ರವಾಸಿ ಮಂದಿರ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು. ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡುವುದು ಮ್ಯಾರಥಾನ್ನ ಉದ್ದೇಶ ಎಂದರು.
ಆರೋಗ್ಯಕರ ಸಮಾಜ ನಿರ್ವಣಕ್ಕೆ ರೈತರ ಕೊಡುಗೆ ಅಪಾರ. ಅವರ ಮನವೊಲಿಸಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಅತಿಯಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಆರೋಗ್ಯಕರ ಆಹಾರ ಬೆಳೆಯಲು ಆದ್ಯತೆ ನೀಡಬೇಕಿದೆ. ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆಯೂ ಕಡಿಮೆಯಾಗುತ್ತಿದೆ. ಆದ್ದರಿಂದ, ಸಾವಯವ ಕೃಷಿಗೆ ಎಲ್ಲರೂ ಒತ್ತು ನೀಡಬೇಕು ಎಂದರು.
ಸಿರಿಧಾನ್ಯ ಮೇಳ: ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಬಳಕೆಯನ್ನು ರೂಢಿಸಿಕೊಳ್ಳಬೇಕು. ಆಗ ಯಾವುದೇ ರೋಗದ ಸಮಸ್ಯೆ ಇರುವುದಿಲ್ಲ. ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶೀಘ್ರದಲ್ಲೇ ಸಿರಿಧಾನ್ಯ ಮೇಳ ಆಯೋಜಿಸಲಾಗುವುದು ಎಂದು ಶಾಸಕರು ಹೇಳಿದರು.
3 ಕಿಮೀ ಮ್ಯಾರಥಾನ್: ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾದ ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ ಮ್ಯಾರಥಾನ್ ಕೋರ್ಟ್ ರಸ್ತೆ, ತಾಲೂಕು ಕಚೇರಿ ವೃತ್ತದ ಮೂಲಕ ಸಾಗಿ, ಬಸವ ಭವನ ವೃತ್ತ ಹಾದು ಮೂರು ಕಿಲೋಮೀಟರ್ ಸಾಗಿ ಮತ್ತೆ ಪ್ರವಾಸಿ ಮಂದಿರದಲ್ಲಿ ಕೊನೆಗೊಂಡಿತು. ಇದಕ್ಕೂ ಮುನ್ನ ಸಾಮೂಹಿಕ ವ್ಯಾಯಾಮ ಲಾಂಛನವನ್ನು ಬಿಡುಗಡೆ ಮಾಡಲಾಯಿತು.