

ಸಿದ್ದಾಪುರ: ಹಾಲಿನ ಗುಣಮಟ್ಟ ಹಾಗೂ ಹಾಲಿನ ಶೇಖರಣೆ ಹೆಚ್ಚಾಗಬೇಕಾದರೆ ಗುಣಮಟ್ಟದ ಹಸಿ ಮೇವಿನ ಅವಶ್ಯಕತೆ ಇದೆ. ಇಲ್ಲಿಯ ವಾತಾವರಣಕ್ಕೆ ಯಾವ ಹಸಿ ಮೇವನ್ನು ಬೆಳೆಯಬೇಕು ಎನ್ನುವ ಕುರಿತು ಮಣ್ಣಿನ ಪರೀಕ್ಷೆ ಮಾಡಿಕೊಳ್ಳಬೇಕು. ಆ ಕುರಿತು ಅಕ್ಟೋಬರ್-ನವೆಂಬರ್ನಲ್ಲಿ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಹೇಳಿದರು.
ಪಟ್ಟಣದ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಉಪವಿಭಾಗದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹೆಚ್ಚು ಹಾಗೂ ಉತ್ತಮ ಮಟ್ಟದ ಹಾಲು ಶೇಖರಣೆ ಮಾಡುತ್ತಿದೆ. ಸಭೆಗಳು ನಡೆಯುತ್ತಿರಬೇಕು. ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಚಿಂತನೆ ನಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ, ಕೆಲವು ಸಂಘಗಳ ಉಪಕೇಂದ್ರಗಳಿಗೆ ತೂಕದ ಯಂತ್ರ, ಹಾಲು ಪರೀಕ್ಷಾ ಯಂತ್ರಗಳನ್ನು ಒಕ್ಕೂಟದ ವಾರ್ಷಿಕ ಮಹಾಸಭೆಯ ನಂತರ ಒಕ್ಕೂಟದ ಸಭೆಯಲ್ಲಿ ಚರ್ಚೆ ನಡೆಸಿ ನೀಡಲಾಗುತ್ತದೆ. ಒಕ್ಕೂಟದಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಹೊಸೂರಿನ ಉಪವಿಭಾಗದ ಕಚೇರಿಗೆ ಬೇಕಾಗುವ ಸೌಲಭ್ಯದ ಕುರಿತು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದರು.
ಕಡಕೇರಿ ಹಾಲು ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೆಗಾರ, ಡಾ.ರಾಕೇಶ, ಡಾ.ವಿನಾಯಕ ಬಿರಾದಾರ, ವಿಸ್ತರಣಾಧಿಕಾರಿ ಚಂದನ ನಾಯ್ಕ ಉಪಸ್ಥಿತರಿದ್ದರು.
ಬಾಳೇಸರ , ಶಿರಳಗಿ, ಬಿಳಗಿ, ಗೊಳಿಮಕ್ಕಿ ಸಂಘದ ಅಧ್ಯಕ್ಷರು ಹಾಗೂ ಹಾರ್ಸಿಕಟ್ಟ ಹಾಲು ಸಂಘದ ಕಾರ್ಯದರ್ಶಿ ಮಾತನಾಡಿದರು. ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಕಳಸದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p><p> ಭಾರತಿ ಭಟ್ಟ ಕವಲಕೊಪ್ಪ ಪ್ರಾರ್ಥಿಸಿದರು. ಶಿರಸಿ ಉಪವಿಭಾಗದ ವ್ಯವಸ್ಥಾಪಕ ಎಸ್.ಎಸ್. ಬಿಜ್ಜೂರು ಹಾಗೂ ವಿಸ್ತರಣಾಧಿಕಾರಿ ಪ್ರಕಾಶ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಬೇಡಿಕೆಗೆ ಸ್ಪಂದನೆ
ಅವಶ್ಯ ಇರುವ ಸಂಘಗಳಿಗೆ ತೂಕದ ಯಂತ್ರ ನೀಡಬೇಕು. ಸಂಘದ ನಿರ್ವಹಣೆಗೆ ಒಂದು ಲೀಟರ್ ಹಾಲಿಗೆ ಒಂದು ರೂ. ಹಾಗೂ ಸಂಘದ ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಬೇಕು. ಇಲ್ಲಿಯ ಉಪವಿಭಾಗದ ಆವರಣದ ವ್ಯವಸ್ಥೆ ಹಾಗೂ ರಸ್ತೆ ಆಗಬೇಕು. ಉಪವಿಭಾಗದ ಕಚೇರಿಗೆ ಸಿಬ್ಬಂದಿ ನೇಮಿಸಿ ಮೂಲಸೌಲಭ್ಯಗಳು ಇಲ್ಲಿಯೇ ದೊರಕುವಂತಾಗಬೇಕು ಎನ್ನುವ ಬೇಡಿಕೆಯನ್ನು ವಿವಿಧ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ವ್ಯವಸ್ಥಾಪಕ ನಿರ್ದೇಶಕರ ಮುಂದಿಟ್ಟಾಗ ಅವರು ಶೀಘ್ರದಲ್ಲಿಯೇ ರಸ್ತೆ ಸರಿಪಡಿಸಲಾಗುವುದು ಹಾಗೂ ಉಪವಿಭಾಗದಲ್ಲಿ ಪಾರ್ಲರ್ ವ್ಯವಸ್ಥೆ ಮಾಡಲಾಗುತ್ತದೆ. ಇನ್ನುಳಿದ ಬೇಡಿಕೆ ಕುರಿತು ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಡಿ.ಟಿ. ಕಳಸದ ತಿಳಿಸಿದರು.