ಸಾಧನೆಗೆ ಬುದ್ಧಿವಂತಿಕೆ ಸಂಪೂರ್ಣ ಬಳಸಿ : ಶಕ್ತಿಧಾಮ ವಿದ್ಯಾರ್ಥಿಗಳಿಗೆ ನಟ ಉಪೇಂದ್ರ ಕಿವಿಮಾತು

shakthi Dhama
Published on

ಮೈಸೂರು: ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಅದ್ಭುತ ಸಾಧನೆ ತೋರಲು ತಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ನಟ ಉಪೇಂದ್ರ ಕರೆ ನೀಡಿದರು.

ನಗರದ ಶಕ್ತಿಧಾಮ ವಿದ್ಯಾಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮೆಲ್ಲರ ತಲೆಯಲ್ಲಿ ಶಕ್ತಿ ಅಡಗಿರುತ್ತದೆ. ಆ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿದರೆ ನೀವು ಅದ್ಭುತ ಶಕ್ತಿವಂತರಾಗುತ್ತೀರ. ವಿದ್ಯಾರ್ಥಿ ಗಳು ವಿವೇಚನೆ, ವಿಚಾರ ಮಾಡಿದರೆ ಅದ್ಭುತವಾಗಿ ಬೆಳೆಯುತ್ತೀರ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರ ತರಲು ಹಲವಾರು ಚಟುವಟಿಕೆಗಳನ್ನು ಶಕ್ತಿಧಾಮ ಶಾಲೆ ಹಮ್ಮಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಹ್ಮ, ವಿಷ್ಣು, ಮಹೇಶ್ವರ ಅವರನ್ನು ಎತ್ತಿ ಆಡಿಸಿದ್ದು ಆದಿಶಕ್ತಿ. ಹೆಣ್ಣು ಮಕ್ಕಳ ಶಕ್ತಿಯನ್ನು ಜಗತ್ತಿಗೆ ತೋರಿಸಲು ನಗರದಲ್ಲಿ ಶಕ್ತಿ ಹೆಸರಿನಲ್ಲಿ ಶಕ್ತಿಧಾಮ ನಿರ್ಮಾಣ ಮಾಡಲಾಗಿದೆ. ವರನಟ ಡಾ.ರಾಜ್ ಕುಮಾರ್ ಕನ್ನಡದ ಶಕ್ತಿಯಾದರೆ ಪಾರ್ವತಮ್ಮ ರಾಜ್‌ಕುಮಾರ್ ಅವರ ಬೆನ್ನ ಹಿಂದೆ ಇದ್ದ ಶಕ್ತಿಯಾಗಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಸ್ಥಾಪಿಸಿದ ಶಕ್ತಿಧಾಮಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷೆ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ನಮ್ಮ ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದು, ಅವರನ್ನು ನಾವೆಲ್ಲರು ಸದಾ ಸ್ಮರಿಸಬೇಕು. ಜಾತಿ, ಧರ್ಮ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನಮಗೆ ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಛದ್ಮವೇಷ, ಏರೋಬಿಕ್ಸ್, ಮಲ್ಲಕಂಬ, ಜಿಮ್ನಾಸ್ಟಿಕ್, ಪಿರಮಿಡ್, ಹೂಪ್ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಕನ್ನಡ, ಹಿಂದಿ ಹಾಗೂ ಆಂಗ್ಲಭಾಷೆಯಲ್ಲಿ ಭಾಷಣ ಮಾಡಿ ಗಮನ ಸೆಳೆದರು. ವಿದ್ಯಾರ್ಥಿಗಳ ತಂಡದಿಂದ ಕಣ್ಮನ ಸೆಳೆಯುವ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ನಟ ಶಿವರಾಜ್‌ಕುಮರ್, ಶಕ್ತಿಧಾಮದ ಮ್ಯಾನೇಜಿಂಗ್ ಟ್ರಸ್ಟಿ ಎಂ. ಸದಾನಂದ, ಶಕ್ತಿಧಾಮದ ನಿರ್ದೇಶಕಿ ಮಂಜುಳಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net