

ನಂಜನಗೂಡು : ಶ್ರೀಮಂತವಾಗಿ ಬೆಳೆದಿರುವ ಕನ್ನಡ ಭಾಷೆಯನ್ನು ಬಳಸಿ, ಉಳಿಸುವುದು ಇಂದಿಗೆ ಅನಿವಾರ್ಯವಾಗಿದೆ. ನಿಮ್ಮ ದಿನನಿತ್ಯದಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಉಪನ್ಯಾಸಕ ಡಾ.ಉಮೇಶ ಬೇವಿನಹಳ್ಳಿ ವಿದ್ಯಾರ್ಥಿಗಳಿಗೆ ಕರೆನೀಡಿದರು.
ನಗರದ ಜೆಎಸ್‌ಎಸ್ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಎಂತಹ ಕನ್ನಡ ಪ್ರೇಮವಿರಬೇಕೆಂದರೆ 1832 ಜುಲೈ 12 ರಂದು ಬೆಂಗಳೂರಿನಲ್ಲಿ ಜನಿಸಿದ ಬೆಂಜಮಿನ್ ಲೂಯಿ ರೈಸ್‌ರಂತಿರಬೇಕು. ಇವರ 8869 ಶಾಸನಗಳು ಮೊತ್ತ ಮೊದಲ ಬಾರಿಗೆ ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳ ಮೂಲಕ ಬೆಳಕು ಕಂಡವು. ಇವುಗಳಲ್ಲಿ ಬಿ.ಎಲ್. ರೈಸ್ ಅವರು ವ್ಯಕ್ತಪಡಿಸಿದ ಅನೇಕ ಅಭಿಪ್ರಾಯಗಳಿವೆ. ಇವರದು ಅಪ್ರತಿಮ ಕನ್ನಡ ಪ್ರೇಮ. 1924 ರಲ್ಲಿ ಲಂಡನ್‌ನ ವಸ್ತು ಪ್ರದರ್ಶನವೊಂದರಲ್ಲಿ ತಮ್ಮನ್ನು ಭೇಟಿ ಮಾಡಿದ ಸೋಸಲೆ ಗರಳಪುರಿ ಶಾಸ್ತ್ರಿಗಳು ರೈಸ್ ಅವರನ್ನು ಕಂಡ ಹರ್ಷದಲ್ಲಿ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದಾಗ ಅಯ್ಯ, ಕನ್ನಡದಲ್ಲೇ ಮಾತನಾಡೋಣವೇ? ಮುದ್ದಾದ ಕನ್ನಡ ಕಿವಿಯ ಮೇಲೆ ಬೀಳದೆ ತುಂಬ ದಿನಗಳಾದವು ಎಂದು ಉದ್ಗರಿಸುವಷ್ಟರ ಮಟ್ಟಿನ ಕನ್ನಡ ಪ್ರೇಮ ಅವರದು. ವಿದೇಶಿಗನೊಬ್ಬನಿಗೆ ಇರುವಂತಹ ಕನ್ನಡ ಪ್ರೇಮ ನಮ್ಮವರಲ್ಲಿ ಇರದಿರುವುದನ್ನು ಕಂಡು ವಿಷಾದವಾಗುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ನಾಡು- ನುಡಿ, ಪ್ರದೇಶ-ಸಂಸ್ಕೃತಿ, ಕನ್ನಡ ಜನಾಂಗದ ಬಗ್ಗೆ ಅಪಾರವಾದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡ ನಾಡಿನಲ್ಲಿ ನವೆಂಬರ್ ಕನ್ನಡಿಗರಾಗದೆ ನಿತ್ಯ ಕನ್ನಡಿಗರಾಗಿ ಬಾಳಿ ಬದುಕಬೇಕೆಂದು ಸಂದೇಶ ನೀಡಿದರು.
ಪ್ರಾಚಾರ್ಯರಾದ ಕೆ.ಎನ್. ಶಿವಕುಮಾರ್,. ಡಾ.ಸಿ.ಎಸ್.ಹೊನ್ನೇಗೌಡ, ಗೂಳಪ್ಪಸ್ವಾಮಿ, ಸಂಚಾಲಕ ಡಾ.ಬಿ.ಕೆ.ಕೆಂಡಗಣ್ಣಸ್ವಾಮಿ, ಎಂ.ಎನ್.ಜಯಶೀಲಾ, ಬಿ.ರೂಪಾ ಉಪಸ್ಥಿತರಿದ್ದರು.