

ಉಪ್ಪಿನಬೆಟಗೇರಿ: ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿದ್ದು, ಮಣ್ಣಿನಿಂದ ಈ ಎಲ್ಲ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯದೇ ಇರುವುದರಿಂದ ಬಾಹ್ಯವಾಗಿ ನೀಡುವುದು ಅನಿವಾರ್ಯ ಎಂದು ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಚ್.ಎಂ. ಬಾದಾಮಿ ಹೇಳಿದರು.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆ ವಿಧಾನ ಕುರಿತು ಸೋಮವಾರ ರೈತರಿಗೆ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳೆಗಳಿಗೆ ಬೇಕಾಗುವ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ರಸಗೊಬ್ಬರಗಳಿಂದ ಒದಗಿಸಬೇಕಾಗಿದೆ. ಈ ರಸಗೊಬ್ಬರದಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಬೆಳೆಗಳಿಗೆ ನೇರವಾಗಿ ದೊರೆಯುವುದರಿಂದ ಅವುಗಳ ಬಳಕೆ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರ ತಲೆಯಲ್ಲಿ ಕೇವಲ ಯೂರಿಯಾ ಇಲ್ಲವೆ ಡಿಎಪಿ ಗೊಬ್ಬರ ಬಳಕೆ ಹೆಚ್ಚಾಗಿದೆ. ಅವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಇರುತ್ತದೆ. ಆದರೆ, ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅವಶ್ಯವಾಗಿರುವ ಪೋಟ್ಯಾಕ್ಯುುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಅವುಗಳನ್ನು ಬಳಸಬಹುದು ಎಂದರು.
ರೈತರು ರಸಗೊಬ್ಬರಕ್ಕೆ ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೋಟ್ಯಾಷ್ ಒದಗಿಸುವ ಇತರೆ ಸಂಯುಕ್ತ ಗೊಬ್ಬರಗಳಾದ 15:15:15, 10:26:26, 22:22:11, 12:32:16, 14:35:14, 17:17:17, 14:28:14,19:19:19 ಹಾಗೂ 20:10:10 ರಸಗೊಬ್ಬರಗಳನ್ನು ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾತನಾಡಿ, ಸಂಘದ ವತಿಯಿಂದ ಇಪ್ರೋ ಕಂಪನಿ ಮೂಲಕ ನೇರವಾಗಿ 250 ಟನ್ ಡಿಎಪಿ ರಸಗೊಬ್ಬರ ತಂದು 50 ಕೆಜಿ ಪ್ಯಾಕೆಟ್ಗೆ 1,350 ರೂ.ಗಳಂತೆ ಮಾರಾಟ ಮಾಡಿದ್ದೇವೆ. ರೈತರಿಗೆ ಇನ್ನು ಗೊಬ್ಬರದ ಬೇಡಿಕೆಯಿದ್ದು, ಬೇರೆಡೆಯಿಂದ ತರಬೇಕಾಗಿದೆ. ಅದಕ್ಕೆ ಸಾಗುವಳಿ, ಹಮಾಲಿ ಸೇರಿ ಹೆಚ್ಚುವರಿಯಾಗಿ 20 ರೂ.ಗಳನ್ನು ನೀಡಬೇಕಾಗುತ್ತದೆ. ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಉಮೇಶ ಮಸೂತಿ, ಕಾರ್ಯದರ್ಶಿ ಕಲ್ಲಪ್ಪ ಕಿತ್ತೂರ, ರೈತರಾದ ಕಲ್ಲಪ್ಪ ಹಟ್ಟಿ, ನಾಗರಾಜ ನರಗುಂದ, ಶಿವಾನಂದ ತಳವಾರ, ಯಲ್ಲಪ್ಪ ಅಷ್ಟಗಿ, ಸಂತೋಷ ಯಲಿಗಾರ, ಮಂಜುನಾಥ ಬೆಳವಡಿ, ಕಾಶೀನಾಥ ದೊಡವಾಡ, ಸಲೀಂ ಖತೀಬ, ಸೇರಿದಂತೆ ಹನುಮನಾಳ, ಹನುಮನಕೊಪ್ಪ, ಉಪ್ಪಿನಬೆಟಗೇರಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.