ಬೆಳೆಗೆ ಕಾಂಪ್ಲೆಕ್ಸ್ ಗೊಬ್ಬರ ಬಳಸಲಿ

26-HNL-1
Published on

ಹಾನಗಲ್ಲ: ರಾಜ್ಯಾದ್ಯಂತ ಈ ಬಾರಿ ಡಿಎಪಿ ಗೊಬ್ಬರದ ಕೊರತೆ ಎದುರಾಗಿದ್ದು, ರೈತರು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ಪೋಷಕಾಂಶಗಳನ್ನು ಹೊಂದಿರುವ ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗಾರಗಟ್ಟಿ ಸಲಹೆ ನೀಡಿದರು.

ಮುಂಗಾರು ಹಂಗಾಮಿಗಾಗಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಮಗ್ರ ಪೋಷಕಾಂಶಗಳನ್ನು ಒದಗಿಸಿದರೆ ಉತ್ತಮ ಬೆಳೆ ಬರುತ್ತದೆ. ರೋಗಗಳಿಂದಲೂ ಮುಕ್ತಿಹೊಂದಲು ಸಾಧ್ಯವಿದೆ. ರೈತರು ಖಾಸಗಿ ಮಾರುಕಟ್ಟೆಯಲ್ಲಿ ಪ್ರಮಾಣೀಕೃತವಲ್ಲದ ಬಿತ್ತನೆ ಬೀಜಗಳನ್ನು ಖರೀದಿಸಿ ಸಮಸ್ಯೆಗೆ ಬೀಳಬಾರದು. ಖರೀದಿಸಿದ ಬಿತ್ತನೆ ಬೀಜಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಅವುಗಳ ರಸೀದಿ ಪಡೆಯಬೇಕು. ನೀರಾವರಿ ಮೂಲಗಳನ್ನು, ಮಣ್ಣಿನ ಗುಣಧರ್ಮಗಳನ್ನು ಆಧರಿಸಿ ಬೆಳೆ ಆಯ್ಕೆ ಮಾಡಬೇಕು. ಎಂಥದೇ ಸಂದರ್ಭದಲ್ಲಿ ಕಳೆನಾಶಕಗಳನ್ನು ಬಳಸುವಾಗಲೂ ತೀರಾ ಎಚ್ಚರಿಕೆ ವಹಿಸಬೇಕು. ಬಳಸುವ ಪ್ರಮಾಣದ ಬಗೆಗೂ ಗಮನಹರಿಸಬೇಕು. ಕೃಷಿಗೆ ಸಂಬಂಧಿಸಿದ ಸಲಹೆ-ಮಾರ್ಗದರ್ಶನಗಳಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.

ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಸಸ್ಯಗಳ ಬೆಳವಣಿಗೆಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ನೈಸರ್ಗಿಕವಾಗಿ ದೊರೆಯುತ್ತವೆ. ಇನ್ನುಳಿದ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಕೇವಲ ಡಿಎಪಿಯನ್ನೇ ಬಿತ್ತನೆಗೆ ಬಳಸಬೇಕೆಂದು ತೀರ್ಮಾನಿಸುವ ಬದಲು ಇದಕ್ಕೆ ಸಮನಾದ ಪರ್ಯಾಯ ರಸಗೊಬ್ಬರಗಳನ್ನು ಬಳಸುವ ಮೂಲಕ ಡಿಎಪಿ ಕೊರತೆಯನ್ನು ಸವಾಲಾಗಿ ಸ್ವೀಕರಿಸಬೇಕು. ಡಿಎಪಿ ಬದಲಾಗಿ 20-20-0-13 ಹಾಗೂ ಪೊಟ್ಯಾಷ ಯುಕ್ತ 15-15-15, 10-26-26, 17-17-17, 19-19-19, 20-10-10 ಗೊಬ್ಬರಗಳನ್ನು ಬಳಕೆ ಮಾಡಿಕೊಳ್ಳಬೇಕು. ರಸಗೊಬ್ಬರಗಳ ಕೊರತೆ ಕುರಿತಂತೆ ಕೃಷಿ ಇಲಾಖೆ ನಡೆಸುವ ತರಬೇತಿಗಳು, ಕಾರ್ಯಾಗಾರಗಳಲ್ಲಿ ರೈತರು ಪಾಲ್ಗೊಂಡು ಮಾಹಿತಿ ಪಡೆಯಬೇಕು. ರಸಗೊಬ್ಬರ ಮಾರಾಟಗಾರರು ಪೊಟ್ಯಾಷ್ ಯುಕ್ತ ಗೊಬ್ಬರಗಳ ಕುರಿತು ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.

ಕೃಷಿ ಇಲಾಖೆ ಸಿಬ್ಬಂದಿಗಳಾದ ಶಾಮನಗೌಡ ಪಾಟೀಲ, ವಿಜಯ ಅಪ್ಪಾಜಿ, ವೀರೇಶ ಮಂತಗಿ, ಧರ್ಮೇಂದ್ರ ಮಡಿವಾಳರ, ಮೌನೇಶ ಚನ್ನಾಪುರ ಇತರರು ಉಪಸ್ಥಿತರಿದ್ದರು.

ಹಾನಗಲ್ಲ, ಚಿಕ್ಕಾಂಶಿ ಹೊಸೂರ, ಅಕ್ಕಿಆಲೂರು, ಆಡೂರು, ತಿಳವಳ್ಳಿ, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಕೇಂದ್ರಗಳಲ್ಲಿ ಸಹಾಯಧನದ ಬಿತ್ತನೆಬೀಜ ವಿತರಣೆ ಕೈಗೊಳ್ಳಲಾಗಿದೆ. 255 ಕ್ವಿಂಟಾಲ್ ಸೋಯಾಅವರೆ, 1105 ಕ್ವಿಂ. ವಿವಿಧ ತಳಿಗಳ ಭತ್ತ, 275 ಕ್ವಿಂ. ಗೋವಿನಜೋಳ, 30 ಕ್ವಿಂ.ಶೇಂಗಾಬೀಜ ಸೇರಿದಂತೆ ಒಟ್ಟು 1666 ಕ್ವಿಂ. ಬಿತ್ತನೆ ಬೀಜ ದಾಸ್ತಾನಿದೆ. ಹಂತ-ಹಂತವಾಗಿ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಿ ವಿತರಿಸಲಾಗುತ್ತದೆ. ಬಿತ್ತನೆ ಬೀಜಗಳ ಕೊರತೆಯಾಗುವುದಿಲ್ಲ. ತೊಗರಿ, ಹೆಸರು ಬಿತ್ತನೆ ಬೀಜಗಳೂ ದಾಸ್ತಾನಿದೆ. ಮಾರುತಿ ಅಂಗಾರಗಟ್ಟಿ, ಎಡಿಎ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net