ಗಣೇಶ ವಿಸರ್ಜನೆಗೆ ತಾತ್ಕಾಲಿಕ ಹೊಂಡ ಬಳಸಿ

Oplus_0
ಯಳಂದೂರು ಪಪಂ ವತಿಯಿಂದ ಗಣೇಶನ ವಿಗ್ರಹ ವಿಸರ್ಜಿಸಲು ನಿರ್ಮಿಸಿರುವ ಕೃತಕ ಹೊಂಡ.
Published on

ಯಳಂದೂರು: ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪಟ್ಟಣ ಪಂಚಾಯಿತಿಯಿಂದ ಪಂಚಾಯಿತಿ ಕಚೇರಿಯ ಬಳಿಯಲ್ಲೇ ತಾತ್ಕಾಲಿಕ ಹೊಂಡ ನಿರ್ಮಿಸಲಾಗಿದ್ದು, ಎಲ್ಲರೂ ಇಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನದಿ, ಕೆರೆಗಳನ್ನು ಭವಿಷ್ಯತ್ತಿಗೆ ಉಳಿಸುವ ನಿಟ್ಟಿನಲ್ಲಿ ಈ ಬಾರಿ ಪರಿಸರಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು ಷರತ್ತುಗಳನ್ನು ವಿಧಿಸಲಾಗಿದೆ. ಅಲ್ಲದೆ ಕಾಲುವೆ, ಕೆರೆ, ನದಿಗಳಲ್ಲಿ ಇದನ್ನು ವಿಸರ್ಜಿಸುವುದರಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಯಿಂದ 5 ಅಡಿ ಆಳದ ಹೊಂಡ ನಿರ್ಮಿಸಿ ಇದಕ್ಕೆ ನೀರನ್ನು ತುಂಬಿಸಲಾಗಿದೆ. ಇದರ ಅಡಿಯಲ್ಲಿ ಎಂ ಸ್ಯಾಂಡ್ ಹಾಕಲಾಗಿದ್ದು ಪಾಲಿಥಿನ್ ಟಾರ್ಪಲ್‌ನಿಂದ ಹೊಂಡ ನಿರ್ಮಾಣವಾಗಿದೆ. ಸುರಕ್ಷತೆಗಾಗಿ ಇದರ ಸುತ್ತಲೂ ಮರದಿಂದ ಬೇಲಿ ಹಾಕಲಾಗಿದೆ. ಇಲ್ಲಿ ಮೂರ್ತಿಗಳನ್ನು ವಿಸರ್ಜಿಸಲು ಮೆಟ್ಟಿಲುಗಳ ವ್ಯವಸ್ಥೆಯೂ ಇದೆ. ಎಲ್ಲ ಮುಗಿದ ಮೇಲೆ ಈ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗಿಡ-ಮರಗಳಿಗೆ ಬಳಸಿಕೊಳ್ಳಲಾಗುವುದು. ಹಾಗಾಗಿ ಪ್ರತಿಯೊಬ್ಬರೂ ಈ ಕೃತಕ ಹೊಂಡದ ಸೌಲಭ್ಯವನ್ನು ಪಡೆದುಕೊಂಡು ಮೂರ್ತಿಯನ್ನು ಇಲ್ಲೇ ವಿಸರ್ಜಿಸಬೇಕು. ಈ ವೇಳೆಯಲ್ಲಿ ಪ್ಲಾಸ್ಟಿಕ್, ಇತರ ತ್ಯಾಜ್ಯಗಳನ್ನು ಪ್ರತ್ಯೇಕಿಸಬೇಕು. ಮಣ್ಣಿನ ಮೂರ್ತಿಯನ್ನು ಮಾತ್ರ ನೀರಿಗೆ ಹಾಕಬೇಕು. ಮೆಟ್ಟಿಲುಗಳೇ ಮೇಲೆ ನಿಂತು ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು ಎಂದರು.

ಮೂರ್ತಿಗಳ ವಿಸರ್ಜನೆ:ಬುಧವಾರ ಗಣೇಶ ಚತುರ್ಥಿ ಮುಗಿದ ಮೇಲೆ ಅನೇಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ಪಪಂ ಕಚೇರಿ ಬಳಿ ನಿರ್ಮಾಣ ಮಾಡಲಾಗಿರುವ ಹೊಂಡದಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡುವ ಮೂಲಕ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net