

ಹಾಸನ: ರಾಜ್ಯ ಸರ್ಕಾರ ಪದವಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಯುವಜನತೆ ಪಾತ್ರ ಅಧಿಕವಾಗಿದ್ದು ಪ್ರಚಲಿತ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದ ಮಾಹಿತಿ ಹೊಂದಬೇಕು. ಇಷ್ಟದ ಕ್ಷೇತ್ರದಲ್ಲಿ ಅಧ್ಯಯನ ಕೈಗೊಂಡು ಗುರಿಯೆಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಹಲವು ಸೌಲಭ್ಯ ಒದಗಿಸುತ್ತಿದ್ದು, ಪ್ರತಿ ಪ್ರಜೆಯು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜುಗಳಲ್ಲಿ ಓದಿಸುವ ಮನಸ್ಸು ಮಾಡಬೇಕು. ಈಗಾಗಲೇ ಸರ್ಕಾರಿ ಶಾಲಾ ಮತ್ತು ಕಾಲೇಜುಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.
ಸಮಾಜದಲ್ಲಿ ಯಾರೂ ಪರಿಪೂರ್ಣರಲ್ಲ. ಅಹಂ, ತಾತ್ಸಾರ ಭಾವವನ್ನು ದೂರವಿಟ್ಟು ಬದುಕಬೇಕು. ಉಪನ್ಯಾಸಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಹೇಳಬೇಕು. ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು ಇರುವ ಸರ್ಕಾರಿ ಕಾಲೇಜುಗಳಲ್ಲಿ ನಮ್ಮ ಕ್ಷೇತ್ರದ ಈ ಮಹಿಳಾ ಕಾಲೇಜು ಸೇರಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ಗುರುರಾಜ್ ಮಾತನಾಡಿ, ರಾಜ್ಯ ಸರ್ಕಾರ ಪದವಿ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 1 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿದ್ದು ನಮ್ಮ ಕಾಲೇಜಿನ ಸಾವಿರ ಮಕ್ಕಳು ಅದರ ಲಾಭ ಪಡೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಬಲಗೊಳ್ಳಬೇಕು ಎಂದು ತಿಳಿಸಿದರು.
ಲ್ಯಾಪ್‌ಟಾಪ್ ವಿತರಣಾ ಸಮಿತಿ ಸಂಚಾಲಕ ಡಾ. ನಾಗೇಂದ್ರನಾಥ್ ಗಿರಿ, ಪ್ರಾಧ್ಯಾಪಕಿ ನಯನ ತಾರಾಮಣಿ ಹಾಗೂ ಇತರರಿದ್ದರು.