

ರಾಮದುರ್ಗ: ಖಾನಾಪುರ, ಕಣಕುಂಬಿಯಲ್ಲಿ ನಿರಂತರ ಮಳೆಯಿಂದಾಗಿ ನವಿಲುತೀರ್ಥ ಜಲಾಶಯದಿಂದ 25 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ಮಲಪ್ರಭೆಗೆ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ, ಜಿಲ್ಲಾಧಿಕಾರಿ
ಎಂ.ಜಿ.ಹಿರೇಮಠ ಸೇರಿ ಅಧಿಕಾರಿಗಳ ತಂಡ ತಾಲೂಕಿನ ವಿವಿಧ ಕಾಳಜಿ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿತು.
ಸುರೇಬಾನದಲ್ಲಿ ಜಿಲ್ಲಾಧಿಕಾರಿ ಆಗಮಿಸು ತ್ತಿದ್ದಂತೆ ಅವರ ಸುತ್ತ ನೆರೆದ ಪ್ರವಾಹ ಪೀಡಿತರು, ಕಳೆದ ವರ್ಷದಂತೆ ಈ ವರ್ಷವೂ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ವರ್ಷದ ಹಾನಿ ಪರಿಹಾರ ಇನ್ನೂ ಕೈ ಸೇರಿಲ್ಲ. ಹಾಗಾಗಿ ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ವಿನಂತಿಸಿ ಸಂಕಷ್ಟ ತೋಡಿಕೊಂಡರು.
ಆತಂಕ ಪಡಬೇಡಿ: ಸುರೇಬಾನ ಹಾಗೂ ಗೊಣ್ಣಾಗರ ಕಾಳಜಿ ಕೇಂದ್ರಗಳಲ್ಲಿನ ವ್ಯವಸ್ಥೆ ಪರಿಶೀಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಹಿರೇಮಠ, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ತಾವು ಯಾರೂ ಆತಂಕಪಡಬೇಡಿ. ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಆಹಾರದ ವ್ಯವಸ್ಥೆಯನ್ನು ತಾಲೂಕಾಡಳಿತ ಮಾಡಲಿದೆ. ಪ್ರವಾಹ ಬರುವ ಮುನ್ನ ಜಿಲ್ಲಾಡಳಿತ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಬನ್ನಿ ಎಂದು ಕೋರಿದರು.
ಬಳಿಕ ಜಿಲ್ಲಾಧಿಕಾರಿಗಳು ನವಿಲುತೀರ್ಥ ಜಲಾಶಯ ಹಾಗೂ ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ತೆರಳಿ, ಮಳೆಯಿಂದಾದ ಹಾನಿ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಸೀಲ್ದಾರ್ ಗಿರೀಶ ಸ್ವಾಧಿ ಇತರರಿದ್ದರು.
ಸುರೇಬಾನ ಹಾಗೂ ಗೊಣ್ಣಾಗರ ಕಾಳಜಿ ಕೇಂದ್ರಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತರು ಆಕ್ರೋಶಗೊಂಡರು. ಕಳೆದ ವರ್ಷದ ಪರಿಹಾರ ಇನ್ನೂ ಬಂದಿಲ್ಲ. ಮತ್ತೆ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಮನೆಬಿಟ್ಟು ಹೋಗಿ ಎಂದರೆ ಹೇಗೆ? ಅಧಿಕಾರಿಗಳ ತಪ್ಪಿನಿಂದ ನಮಗೆ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ದೂರಿದರು. ಸಂತ್ರಸ್ತರನ್ನು ಸಮಾಧಾನಪಡಿಸಿದ ಶಾಸಕ ಯಾದವಾಡ, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಸೂಚಿಸಿದ್ದೇನೆ. ನಿಮ್ಮ ಸಮಸ್ಯೆ ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದರು.
ರಾಮದುರ್ಗ ತಾಲೂಕಾಡಳಿತ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದೆ. ಸುರೇಬಾನದಲ್ಲಿ 39 ಕುಟುಂಬಗಳು, ಗೊಣ್ಣಾಗರದಲ್ಲಿ 12 ಕುಟುಂಬಗಳು ಕಾಳಜಿ ಕೇಂದ್ರದಲ್ಲಿವೆ. ಕರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆಯ ಜತೆಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. |ಎಂ.ಜಿ. ಹಿರೇಮಠ. ಜಿಲ್ಲಾಧಿಕಾರಿ, ಬೆಳಗಾವಿ