ಬ್ರಹ್ಮರಥ ಸಮರ್ಪಣೆ ದೇವರು ನೀಡಿದ ಸೌಭಾಗ್ಯಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ

mng-jan14-ratha3
Published on

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಸಮರ್ಪಣೆಯ ಕಾಲದಲ್ಲಿ ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮರಥ ಸಮರ್ಪಣೆ ಸಮರ್ಪಣೆಯಾಗುತ್ತಿರುವುದು ದೇವರೇ ನೀಡಿದ ಸೌಭಾಗ್ಯ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.


ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಸ್ವಾಗತ ಕಾರ್ಯಕ್ರಮ ಹಾಗೂ ಭವ್ಯ ಮೆರವಣಿಗೆ ಕೂಳೂರು ಗೋಲ್ಡ್ ಫಿಂಚ್ ಮೈದಾನದಿಂದ ಶ್ರೀಕ್ಷೇತ್ರದವರೆಗೆ ಭಾನುವಾರ ನಡೆಯಿತು. ಈ ಸಂದರ್ಭ ಸ್ವಾಮೀಜಿ ಆಶೀರ್ವಚನ ನೀಡಿದರು.


ಗೋವಿಂದ ಎನ್ನುವ ಧ್ವನಿಯಲ್ಲಿ ದೇವರ ಸಮೀಪಕ್ಕೆ ತಲುಪುವ ಗುರುತ್ವಾಕರ್ಷಣ ಶಕ್ತಿ ಇದೆ. ನಮ್ಮ ನಡೆ, ನುಡಿ ಭಗವಂತನಿಗೆ ಸಾಮಿಪ್ಯವಿರಬೇಕು. ದೇಹವೆಂಬ ರಥದಲ್ಲಿ ಭಗವಂತನಿದ್ದಾಗ ಮಾತ್ರ ಚಟುವಟಿಕೆಗಳು ನಡೆಯುತ್ತದೆ. ಭಗವಂತನ ಧ್ಯಾನದಿಂದ ಪಾಪ ಪರಿಹಾರವಾಗುತ್ತದೆ ಎಂದರು.
ಉರ್ವಾಸ್ಟೋರ್ ಶ್ರೀ ಗಣಪತಿ ದೇವಳದ ತಂತ್ರಿವರೇಣ್ಯ ವೇ. ಮೂ. ಡಾ.ಶಿವಪ್ರಸಾದ್ ತಂತ್ರಿಗಳು ಮಾತನಾಡಿ, ಉರ್ವ ಮಹಾಗಣಪತಿಗೆ ಉತ್ತರಾಯಣ ಆರಂಭದಲ್ಲಿ ಪುಣ್ಯ ದಿನದಂದು ಬ್ರಹ್ಮರಥ ಸಮರ್ಪಣೆಯಾಗುತ್ತಿದೆ. ರಥ ಸಪ್ತಮಿಯಂದು ಬ್ರಹ್ಮರಥೋತ್ಸವ ನಡೆಯುತ್ತಿದೆ. ಪ್ರತಿಯೊಬ್ಬರೂ ದೇವರ ಪುಣ್ಯದ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.


ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ದೇವರ ಕೃಪಾಕಟಾಕ್ಷ ಇದ್ದಾಗ ನಮ್ಮ ಕೆಲಸ ಯಶಸ್ವಿಯಾಗಲು ಸಾಧ್ಯ. ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸರ್ವರ ಸಹಕಾರ ಅವಶ್ಯ ಎಂದರು.


ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಎಂ. ಪ್ರಾಸ್ತಾವಿಕ ಮಾತನಾಡಿ, 70 ಲಕ್ಷ ರೂ. ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. 7 ಟನ್ ಭಾರ ಇದ್ದು, ಗಣಪತಿ ದೇವರ 36 ಅವತಾರಗಳ ಪೈಕಿ 12 ಅವತಾರಗಳನ್ನು ರಥದಲ್ಲಿ ಬಿಂಬಿಸಲಾಗಿದೆ ಎಂದರು.
ಈ ಸಂದರ್ಭ ರಥ ಕೆತ್ತನೆ ಶಿಲ್ಪಿ ಹರೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.


ಬಳಿಕ ಬ್ರಹ್ಮರಥಕ್ಕೆ ಆರತಿ, ಪುಷ್ಪಾರ್ಚನೆ, ಕುಣಿತ ಭಜನೆ ನಡೆಯಿತು. ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬ್ಯಾಂಕ್ ಆ್ ಬರೋಡದ ವಲಯ ಮುಖ್ಯಸ್ಥೆ ಗಾಯತ್ರೀ, ಮನಪಾ ವಿಪಕ್ಷ ನಾಯಕ ಟಿ. ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರಾದ ಕಿರಣ್ ಕೋಡಿಕಲ್, ಗಣೇಶ್ ಕುಲಾಲ್, ಜಯಲಕ್ಷ್ಮೀ ಶೆಟ್ಟಿ, ಅನಿಲ್ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಗಿರಿಧರ ಶೆಟ್ಟಿ, ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ಸತೀಶ್ ಆಳ್ವ ಸಹಿತ ಮತ್ತಿತರರು ಇದ್ದರು.
ಶ್ರೀಧರ ಮಣಿಯಾಣಿ ಎಂ. ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net