ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶ

mng-feb15-urwa store2
Published on

ಮಂಗಳೂರು: ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವರಿಗೆ ಗುರುವಾರ ದೇರೆಬೈಲ್ ಡಾ.ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ರತ್ನಾಕರ ಭಟ್ ಅವರ ಸಹಯೋಗದಲ್ಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.


ಬೆಳಗ್ಗೆ 9.05ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಶ್ರೀ ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ದೇವರ ನೈವೇದ್ಯ ಸ್ವೀಕರಿಸಿದರು.


ಸಂಜೆ ದಿಕ್ಪಾಲ ಹೋಮಗಳು, ನೂತನ ಬಲಿಪೀಠಗಳ ಪ್ರತಿಷ್ಠೆ, ಬ್ರಹ್ಮರಥಕ್ಕೆ ದಿಕ್ಪಾಲ ಹೋಮಗಳು, 101 ಕಲಶಾಭಿಷೇಕ, ಅಧಿವಾಸಹೋಮ, ಬ್ರಹ್ಮರಥಾಧಿವಾಸ, ಬಯನ ಬಲಿ ಹೊರಟು ಉತ್ಸವ, ಉರಗಬಂಧದ ಅಶ್ವತ್ಥಕಟ್ಟೆಯಲ್ಲಿ ನಾಗಸನ್ನಿಧಾನದಲ್ಲಿ ಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ, ರಾತ್ರಿ ಪೂಜೆ, ಶ್ರೀ ಭೂತಬಲಿ ನಡೆಯಿತು.


ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಆಳ್ವ ಮುಡಾರೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ರಾವ್, ಸೇವಾ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಎಂ., ಕೋಶಾಧಿಕಾರಿ ಕೆ.ಗೋಪಾಲಕೃಷ್ಣ ಪೂಜಾರಿ, ಉಪಾಧ್ಯಕ್ಷ ಗೋಪಾಲಕೃಷ್ಣ ರಾವ್, ಆಂತರಿಕ ಲೆಕ್ಕ ಪರಿಶೋಧಕ ಬಾಲಕೃಷ್ಣ ಬಿ.ಎಸ್., ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net