ಫೆಬ್ರವರಿ 11 ರಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶ, ವರ್ಷಾವಧಿ ಜಾತ್ರೆ

mng-jan14-urwa
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಹಾಪೂಜೆಯ ಆಮಂತ್ರಣಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಶಂಕರ್ ಅವರು ಭಾನುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಿದರು. ಶಾಸಕ ಡಿ.ವೇದವ್ಯಾಸ ಕಾಮತ್, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on

ಮಂಗಳೂರು:  ನಗರದ ಉರ್ವ ಬೋಳೂರಿನ ಪುರಾತನ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆಬ್ರವರಿ 11 ರಿಂದ 15 ತನಕ ಹಾಗೂ ವರ್ಷಾವಧಿ ಉತ್ಸವವು ಫೆಬ್ರವರಿ 16 ರಿಂದ ಮಾರ್ಚ್ 2 ತನಕ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವ ಸಂದರ್ಭ ಪ್ರತಿದಿನ  ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭೆ, ಮನೋರಂಜನೆ ಸಹಿತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 13 ರಂದು ಮುಂಜಾನೆ ಶ್ರೀ ದೇವರ ಗರ್ಭಗುಡಿಯ ಶಿಖರ ಕಲಶ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ಮಾರಿಯಮ್ಮ ದೇವರ ಪುನರ್ ಪ್ರತಿಷ್ಠೆ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಶಂಕರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರ್ಷಾವಧಿ ಮಹಾಪೂಜೆ
ಫೆಬ್ರವರಿ 16 ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, 23 ರಂದು ಚಂಡಿಕಾಯಾಗ, 26 ಹಾಗೂ 27 ರಂದು ವರ್ಷಾವಧಿ ಮಹಾಪೂಜೆ ನಡೆಯುತ್ತದೆ. ಮಾರ್ಚ್ 2 ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ವರ್ಷಾವಧಿ ಉತ್ಸವ ಮುಕ್ತಾಯವಾಗಲಿದೆ ಎಂದು ಅವರು ವಿವರಿಸಿದರು.
 ಈ ಸಂಭ್ರಮದ ಸಂದರ್ಭ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ, ವರ್ಷಾವಧಿ ಮಹಾಪೂಜೆ. ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ, ಧಾರ್ಮಿಕ ಸಭಾ ಕಲಾಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನೆರವೇರಲಿದೆ
ಪ್ರಚಾರ ರಥ ಸಂಚಾರ ಆರಂಭ
ಬ್ರಹ್ಮಕಲಶೋತ್ಸವದ ಪ್ರಚಾರ ರಥವು ಸಂಚಾರ ಆರಂಭಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಹೊರೆಕಾಣಿಕೆ ಮೆರವಣಿಗೆಯು ಫೆಬ್ರವರಿ 9 ರಂದು ಮಧ್ಯಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನ ಹಾಗೂ ಕೂಳೂರು ಸಮೀಪದ ಗೋಲ್ಡ್ ಫಿಂಚ್ ಮೈದಾನದಲ್ಲಿ ಏಕ ಕಾಲದಲ್ಲಿ ಹೊರಡಲಿದ್ದು, ಉಭಯ ಕಡೆಗಳ ಹೊರೆಕಾಣಿಕೆ ಮೆರವಣಿಗೆಯು ಮಂಗಳೂರು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಅವರು ಹೇಳಿದರು.
ಬೃಹತ್ ಸಭಾಂಗಣ ಲೋಕಾರ್ಪಣೆ
ಸುಮಾರು ಆರು ಕೋಟಿ ರೂ ವೆಚ್ಚದ ನೂತನ ಬೃಹತ್ ಸಭಾಂಗಣದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಇದು ಫೆಬ್ರವರಿ 3 ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಮಂಗಳೂರು ಮೊಗವೀರ ಏಳುಪಟ್ಣ ಸರಿಯುಕ್ತ ಸಭಾ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಮೇಲುಸ್ತುವಾರಿಯಲ್ಲಿ ವಿವಿಧ ಉಪಸಮಿತಿಗಳ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಈ ಎಲ್ಲಾ ಮಹತ್ಕಾರ್ಯಗಳು ನಡೆಯಲಿ ಎಂದು ಅವರು ಹೇಳಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಬಿಡಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಡಿ.ವೇದವ್ಯಾಸ ಮಾತ್, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಣ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ  ವಸಂತ ಅಮೀನ್ ಬೈಕಂಪಾಡಿ, 7 ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಚಾರ/ಮಾಧ್ಯಮ ಸಮಿತಿಯ ಯಶವಂತ ಬೋಳೂರು, ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿ, ಶಿವಾನಂದ, ಅವಿಭಜಿತ ದಕ್ಷಿಣ ಕನ್ನಡ ಮೊಗವೀರ ಮಹಿಳಾ ಘಟಕದ ಅಧ್ಯಕ್ಷೆ ಉಷಾ ರಾಣಿ ಬೋಳೂರು, ಪಾಲಿಕೆ ಸದಸ್ಯ ಗಣೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net