

ಮಂಗಳೂರು: ಮಂಗಳೂರಿನ ಉರ್ವ ಮೈದಾನ ಇನ್ಮುಂದೆ ರಾತ್ರಿಯಲ್ಲೂ ಝಗಮಗಿಸಲಿದೆ. ಮೈದಾನಕ್ಕೆ ಎರಡು ಬೃಹತ್ ಸ್ಟೇಡಿಯಂ ಮಾಸ್ಟ್‌ಗಳನ್ನು ಅಳವಡಿಸಲಾಗಿದ್ದು, ಶೀಘ್ರ ಇನ್ನೆರಡು ದೀಪ ಕಂಬಗಳ ಅಳವಡಿಕೆ ನಡೆಯಲಿದೆ.
ಉರ್ವ ಮೈದಾನದಲ್ಲಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳು ರಾತ್ರಿ ವೇಳೆ ನಡೆಯುತ್ತವೆ. ಸರಿಯಾದ ದೀಪದ ವ್ಯವಸ್ಥೆ ಇಲ್ಲದೆ ಆಯೋಜಕರು ಸಮಸ್ಯೆ ಅನುಭವಿಸುತ್ತಿದ್ದರು. ಪ್ರಸಕ್ತ ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆಯ 21.10 ಲಕ್ಷ ರೂ. ಮತ್ತು ಸಾಮಾನ್ಯ ನಿಧಿಯ 14 ಲಕ್ಷ ರೂ. ಮೊತ್ತದಲ್ಲಿ ಸ್ಟೇಡಿಯಂ ಮಾಸ್ಟ್ ಅಳವಡಿಸಲಾಗುತ್ತಿದೆ.
4000 ವ್ಯಾಟ್ ಸಾಮರ್ಥ್ಯ
200 ವ್ಯಾಟ್ ಸಾಮರ್ಥ್ಯದ ಒಂದು ಕಂಬದಲ್ಲಿ ತಲಾ 10ರಂತೆ 20 ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದ್ದು, ಒಟ್ಟು ಸಾಮರ್ಥ್ಯ 4 ಸಾವಿರ ವ್ಯಾಟ್. ಇದರಿಂದ ರಾತ್ರಿ ವೇಳೆ ಮೈದಾನ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಲಿದೆ. ಮಂಗಳೂರಿನ ವೈದೇಹಿ ಎಂಟರ್‌ಪ್ರೈಸಸ್ ಸಂಸ್ಥೆ ಲೈಟ್‌ಗಳನ್ನು ಅಳವಡಿಸಿದ್ದು, ಇನ್ನೆರಡು ಕಂಬಗಳ ಅಳವಡಿಕೆಗೆ ಸಂಬಂಧಿಸಿ ತಳಪಾಯ ಸಿದ್ಧಪಡಿಸುವ ಕೆಲಸಗಳೂ ನಡೆದಿವೆ.
ಮಂಗಳೂರಿನ ಮಟ್ಟಿಗೆ ಈ ಮಾದರಿಯ ದೀಪಗಳನ್ನು ಅಳವಡಿಸಿರುವುದು ಇದೇ ಮೊದಲು ಎನ್ನಬಹುದು. ಮುಂದಿನ ದಿನಗಳಲ್ಲಿ ಮಂಗಳಾ ಕ್ರೀಡಾಂಗಣ, ನೆಹರು ಮೈದಾನಗಳಿಗೂ ಇದೇ ರೀತಿ ದೀಪಕಂಬ ಅಳವಡಿಸಿದರೆ ರಾತ್ರಿ ವೇಳೆ ಕ್ರೀಡಾಕೂಟಗಳ ಆಯೋಜನೆಗೆ ಸಹಕಾರಿಯಾಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಏನಿದು ಸ್ಟೇಡಿಯಂ ಮಾಸ್ಟ್?
ಕ್ರೀಡಾಂಗಣಗಳಲ್ಲಿ ಅಳವಡಿಸುವ ಹಲವು ವಿದ್ಯುತ್ ದೀಪಗಳನ್ನು ಹೊಂದಿರುವ ಬೃಹತ್ ದೀಪ ಕಂಬವೇ ಸ್ಟೇಡಿಯಂ ಮಾಸ್ಟ್. ಮೈದಾನ ಸುತ್ತ ನಾಲ್ಕು ಬದಿ ಎತ್ತರದ ಕಂಬಗಳಲ್ಲಿರುವ ಈ ದೀಪಗಳು ರಾತ್ರಿ ವೇಳೆಯಲ್ಲೂ ಹಗಲಿನಷ್ಟೇ ಪ್ರಖರ ಬೆಳಕು ನೀಡುತ್ತದೆ. ಹೊನಲು ಬೆಳಕು ಪಂದ್ಯಗಳು ನಡೆಯುವಾಗ ಇದನ್ನು ಉರಿಸಲಾಗುತ್ತದೆ.
ಕ್ರೀಡಾ ಸಂಘಟಕರ ಹಲವು ಸಮಯಗಳ ಬೇಡಿಕೆ ಮನ್ನಿಸಿ 14ನೇ ಹಣಕಾಸು ಯೋಜನೆ ಮತ್ತು ಸಾಮಾನ್ಯ ನಿಧಿಯಿಂದ ಉರ್ವ ಮೈದಾನ ವಿದ್ಯುದೀಕರಣ ಯೋಜನೆಯಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಶೀಘ್ರ ಇನ್ನೆರಡು ದೀಪ ಕಂಬಗಳನ್ನು ಅಳವಡಿಸಲಾಗುವುದು.
ವೇದವ್ಯಾಸ ಕಾಮತ್, ಶಾಸಕ