

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿ.ವಿ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಆಯ್ದ 10 ಪ್ರಸಿದ್ಧ ಹುಲಿವೇಷ ತಂಡಗಳ ಪಿಲಿ ನಲಿಕೆ-2023 ಅ.23ರಂದು ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ತುಳುನಾಡಿನ ಅಪ್ರತಿಮ ಕಲಾ ಪರಂಪರೆಯಲ್ಲಿ ಒಂದಾದ ಹುಲಿವೇಷ ಇಂದು ಕುಣಿತ, ಬಣ್ಣಗಾರಿಕೆ, ನರ್ತನ, ಹಿನ್ನೆಲೆ ಸಂಗೀತ ಹೀಗೆ ಎಲ್ಲ ವಿಭಾಗದಲ್ಲೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೂಲ ಸೊಗಡಿನೊಂದಿಗೆ ಪರಂಪರೆಯನ್ನು ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಮಂಗಳೂರು ದಸರಾದ ಸಂದರ್ಭದಲ್ಲಿ ಪಿಲಿ ನಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ 8ನೇ ಆವೃತ್ತಿ ನಡೆಯುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಷ್ಠಿತ 10 ತಂಡಗಳು ಭಾಗವಹಿಸಲಿರುವ ಪಿಲಿನಲಿಕೆ ಸ್ಪರ್ಧೆಯನ್ನು ಬೆಳಗ್ಗೆ 11 ಗಂಟೆಗೆ ಶ್ರೀಮದ್ ಆನೆಗುಂದಿ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿರುವರು. ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಹಾಗೂ ಪೊಲೀಸ್ ಕಮಿಷನರ್‌ಅನುಪಮ್ ಅಗರ್‌ವಾಲ್ ಉಪಸ್ಥಿತರಿರಲಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 5 ಲಕ್ಷ ರೂ. ಹಾಗೂ ಟ್ರೋಫಿ, ದ್ವಿತೀಯ 3 ಲಕ್ಷ ರೂ. ಹಾಗೂ ಟ್ರೋಫಿ, ತೃತೀಯ 2 ಲಕ್ಷ ರೂ., ಟ್ರೋಫಿ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಬಣ್ಣಗಾರಿಕೆ, ಕರಿ ಹುಲಿ, ಮರಿ ಹುಲಿ, ತಾಸೆ, ಮುಡಿ ಹಾರಿಸುವುದು, ನರ್ತನ ವಿಜೇತರಿಗೆ ತಲಾ 50 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ 50 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪರ್ಧಾ ಕಾರ್ಯಕ್ರಮವೊಂದಕ್ಕೆ ಜರ್ಮನ್ ಸ್ಟ್ರಕ್ಚರ್ ಅಳವಡಿಸಲಾಗುತ್ತಿದ್ದು, 10 ಸಾವಿರ ಜನರು ಕುಳಿತು ನೋಡುವ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸೆಯನ್ನು ಮಾಡಲಾಗುವುದು.
ಹಿಂದಿ, ಕನ್ನಡ, ತುಳು ಚಿತ್ರ ರಂಗದ ತಾರೆಯರು, ವಿಶೇಷವಾಗಿ ಸುನೀಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ ಹಾಗೂ ಕ್ರಿಕೆಟ್ ಲೋಕದ ಸಾಧಕರಾದ ಹರ್ಭಜನ್ ಸಿಂಗ್, ಜಾಂಟಿ ರೋಡ್ಸ್, ಪಿಲಿನಲಿಕೆಗೆ ತಾರಾ ಮೆರುಗು ನೀಡಲಿದ್ದಾರೆ. ರಾಜಕೀಯ ನಾಯಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು ಎಂದು ಮಿಥುನ್ ರೈ ಮಾಹಿತಿ ನೀಡಿದರು.
ನಮ್ಮ ಟಿವಿಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ, ಅವಿನಾಶ್, ವಿಕಾಸ್, ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು.