ಅ. 16 ರಂದು ಅರ್ಕಾಟ್ ದರ್ಗಾದಲ್ಲಿ ಉರುಸು

DARGA URUSU
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಮೌಲಾನಾ ಯೂಸೂಫ್ ಖಾದ್ರಿ ಸುದ್ದಿಗೋಷ್ಠಿ ನಡೆಸಿದರು. ಮೌಲಾನಾ ಮೊಹ್ಮದ್ ಹುಸೇನ್, ಮೊಹ್ಮದ್ ಇರ್ಫಾನ್ ಇದ್ದಾರೆ.
Published on

ವಿಜಯಪುರ: ಐತಿಹಾಸಿಕ ಹಾಗೂ ಭಾವೈಕ್ಯತೆ ಹಿನ್ನೆಲೆಯುಳ್ಳ ಪ್ರಸಿದ್ಧ ಅರ್ಕಾಟ್ ದರ್ಗಾದ ಹಜರತ್ ಸುಲ್ತಾನ್ ಸೈಯ್ಯದ್ ಷಹಾ ಅಬ್ದುಲ್ ರೆಹಮಾನ್ ಹುಸೈನಿ ಖಾದ್ರಿ ಸೀಬಗತ್-ಉಲ್ಲಾಹಿ ಅವರ ಪವಿತ್ರ ಉರುಸು ಅ.16 ರಂದು ಶ್ರದ್ಧಾಭಕ್ತಿಯಿಂದ ನೆರವೇರಲಿದೆ ಎಂದು ದರ್ಗಾದ ಪ್ರಮುಖರಾದ ಮೌಲಾನಾ ಯೂಸೂಫ್ ಖಾದ್ರಿ ತಿಳಿಸಿದರು.

ಈ ಪವಿತ್ರ ಉರುಸು ಅಂಗವಾಗಿ ಅ.15 ರಂದು ಪವಿತ್ರ ಗಂಧದ (ಸಂದಲ್) ಕಾರ್ಯಕ್ರಮ ನಡೆಯಲಿದ್ದು, ಇದರ ಪ್ರಯುಕ್ತ ವೈಭವಯುತ ಮೆರವಣಿಗೆ ನಡೆಯಲಿದೆ. ದರ್ಗಾದ ಸಜ್ಜಾದೆ ನಶೀನ್ ಆಗಿರುವ ಸೈಯ್ಯದ್ ಷಾಹ ಇಕ್ಬಾಲ್ ಪೀರಾ ಹುಸೈನಿ ಹಾಗೂ ಡಾ.ಸೈಯ್ಯದ್ ತಕೀಪೀರಾ ಹುಸೈನಿ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಮೆರವಣಿಗೆ ನಡೆಯಲಿದೆ. ಸಾವಿರಾರು ಯುವಕರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮೆರವಣಿಗೆಯು ಸೋಲಾಪುರ ನಾಕಾ, ಹುತಾತ್ಮ ವೃತ್ತ, ಹಜರತ್ ಅಬ್ದುಲ್ ರಜಾಕ್ ದರ್ಗಾ, ಕೇಂದ್ರ ಬಸ್ ನಿಲ್ದಾಣ, ಬಾಗಲಕೋಟೆ ಕ್ರಾಸ್, ಅತಾವುಲ್ಲಾ ವೃತ್ತ, ಜಾಮೀಯಾ ಮಸೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅರ್ಕಾಟ್ ದರ್ಗಾಕ್ಕೆ ತಲುಪಿ ಸಂಪನ್ನಗೊಳ್ಳಲಿದೆ. ಅ. 16 ರಂದು ಉರುಸು ನಡೆಯಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಜಾಮೀಯಾ ಮಸೀದಿ ಬಳಿ ಇರುವ ಅರ್ಕಾಟ್ ದರ್ಗಾ ಭಾವೈಕ್ಯತೆಯ ಕೇಂದ್ರಬಿಂದುವಾಗಿದೆ. ದವಾ ಹಾಗೂ ದುವಾ ಮೂಲಕ ಪ್ರಸಿದ್ಧಿ ಪಡೆದಿದ್ದು, ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವಾರು ಭಾಗಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಮೌಲಾನಾ ಮೊಹ್ಮದ್ ಹುಸೇನ್, ಮೊಹ್ಮದ್ ಇರ್ಫಾನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net