

ಅನ್ಸಾರ್ ಇನೋಳಿ ಉಳ್ಳಾಲ
ಉರುಸ್ ಮುಗಿಯುವ ದಿನದಂದೇ ಊರಿನಲ್ಲಿ ಜಾತ್ರೆ ಸಂಭ್ರಮ... ಎರಡೂ ಏಕಕಾಲದಲ್ಲಿ ನಡೆದರೆ ಜನಜಂಗುಳಿ ಜತೆ ಸೌಹಾರ್ದಕ್ಕೆ ಧಕ್ಕೆಯಾಗುವ ಆತಂಕ... ಇದಕ್ಕೆ ಅವಕಾಶ ಕಲ್ಪಿಸಬಾರದೆನ್ನುವ ನೆಲೆಯಲ್ಲಿ ಜಾತ್ರೆಗೆ ಮೊದಲೇ ಉರುಸ್ ಮುಗಿಸಲು ಮುಂದಾದ ಸಮಿತಿ ಉರುಸ್ ದಿನಾಂಕವನ್ನೇ ಬದಲಾಯಿಸುವ ಮೂಲಕ ಊರಿನಲ್ಲಿ ಸೌಹಾರ್ದ par ಚಿರಾಯುಗೊಳಿಸಿದೆ..!-ಇದು ನಡೆದಿದ್ದು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದಲ್ಲಿ. ಉಳ್ಳಾಲ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಸರ್ವ ಧರ್ಮೀಯರು ಪರಸ್ಪರ ಪ್ರೀತಿ, ವಿಶ್ವಾಸದಿಂದಲೇ ಜೀವನ ಸಾಗಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ ರಾಜಕೀಯ ಕಾರಣದಿಂದ ಸಣ್ಣ ಪುಟ್ಟ ಘಟನೆಗಳು ನಡೆದರೂ ರಾಜಕೀಯ ಮೇಲಾಟಕ್ಕಾಗಿ ಮಾಧ್ಯಮ, ಜಾಲತಾಣಗಳ ಮೂಲಕ ಹೊರಜಿಲ್ಲೆಗಳಲ್ಲಿ ಪ್ರಚಾರ ಪಡೆಯತ್ತದೆಯೇ ಹೊರತು ಸ್ಥಳೀಯವಾಗಿ ಸುದ್ದಿಯೇ ಆಗದೆ ತಣ್ಣಗಾಗುತ್ತವೆ. ಆದರೂ ಗ್ರಾಮೀಣ ಭಾಗದಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ ಎನ್ನುವುದಕ್ಕೆ ಬೆಳ್ಮ ಗ್ರಾಮದಲ್ಲಿ ನಡೆಯುವ ಉರುಸ್ ಮತ್ತು ಜಾತ್ರೆ ಸಾಕ್ಷಿ ಹೇಳುತ್ತವೆ. ಬೆಳ್ಮ ಗ್ರಾಮದ ರೆಂಜಾಡಿ ಕೇಂದ್ರ ಜುಮಾ ಮಸೀದಿಗೆ 710 ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲೇ ಪೆಲತ್ತಡಿ ಜಾತ್ರೆಯ ಭಂಡಾರ ಹೋಗುವ ಸಂದರ್ಭ ಮಸೀದಿಯ ಮುಂದೆ ನಿಶ್ಶಬ್ದ ಕಾಪಾಡಿ ಪ್ರಾರ್ಥಿಸಿ ಹೋಗುವ ಪದ್ಧತಿ ನಡೆಕೊಂಡು ಬಂದಿದ್ದು ಈಗಲೂ ಮುಂದುವರಿದಿದೆ. ಜಾತ್ರೆ ಮತ್ತು ಉರುಸ್‌ಗೆ ಹೊರ ಜಿಲ್ಲೆ, ಗ್ರಾಮದ ಜನರು ಆಗಮಿಸುವುದರಿಂದ ಜನಜಂಗುಳಿಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಮಾತ್ರವಲ್ಲದೆ ಇಲ್ಲಿನ ಸೌಹಾರ್ದ ಬಯಸದ ಕಿಡಿಗೇಡಿಗಳಿಂದ ಕಿರಿಕ್ ಎದುರಾಗುವ ಆತಂಕ ಇದ್ದೇ ಇರುತ್ತದೆ. ಂಥದ್ದಕ್ಕೆ ಅವಕಾಶ ಕಲ್ಪಿಸದೆ ಗ್ರಾಮದಲ್ಲಿ ಸೌಹಾರ್ದ ನೆಲೆಗೊಳಿಸಲು ಮಸೀದಿ ಆಡಳಿತ ಸಮಿತಿ ಮುಂದಾಗಿದೆ. ಉಳ್ಳಾಲ ಉರುಸ್ ಸಂದರ್ಭದಲ್ಲೂ ತೊಕ್ಕೊಟ್ಟು ಓವರ್ ಬ್ರಿಡ್ಜ್ ದೈವಸ್ಥಾನ ಸಮಿತಿ ಇಂತಹದ್ದೇ ನಿರ್ಧಾರ ಕೈಗೊಂಡು ವ್ಯಾಪಕ ಸುದ್ದಿಯಾಗಿತ್ತು. ತೊಕ್ಕೊಟ್ಟಿನ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನೇಮ ನಡೆಯುತ್ತದೆ. ಆದರೆ 2022ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಉಳ್ಳಾಲ ಉರುಸ್ ನಡೆದಿತ್ತು. ಈ ಹಿನ್ನೆಲೆಯಲ್ಲಿ ನೇಮವನ್ನು ಒಂದು ತಿಂಗಳು ಮುಂದೂಡಲಾಗಿತ್ತು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡು ರಾಜ್ಯಮಟ್ಟದಲ್ಲೂ ಭಾರಿ ಸುದ್ದಿಯಾಗಿತ್ತು. ಇದೀಗ ಬೆಳ್ಮದಲ್ಲೂ ಅಂಥದ್ದೇ ಪ್ರಸಂಗ ಪುನರಾವರ್ತನೆಯಾಗಿದೆ.
ಜಾತ್ರೆಗಾಗಿ ಉರುಸ್ ದಿನಾಂಕ ಬದಲಾವಣೆ
ಇಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಉರುಸ್ ಆಚರಿಸಿಕೊಂಡು ಬರಲಾಗಿದ್ದು, ನಾನಾ ಭಾಗದ ಜನರು ಆಗಮಿಸುತ್ತಾರೆ. ಈ ಬಾರಿ ಉರುಸ್ ಸಹಿತ ಬೃಹತ್ ಸ್ವಲಾತ್ ವಾರ್ಷಿಕ, ಎಂಟು ದಿನಗಳ ಧಾರ್ಮಿಕ ಪ್ರಭಾಷಣವನ್ನು ಜ.19ರಿಂದ 26ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಈ ಬಾರಿಯ ಶ್ರೀ ಅರಸು ಪೈಂದೋಷ್ಣಾಯ ಪೊಸಭೂತ ಬಂಟ ದೈವಸ್ಥಾನದ ದೈವಗಳ ನೇಮೋತ್ಸವ(ಪೆಲತ್ತಡಿ ಜಾತ್ರೆ) ಜ.24ರಿಂದ 27ರವರೆಗೆ ನಡೆಯಲಿದೆ. ಹೀಗಾಗಿ ಎರಡೂ ಒಂದೇ ಸಮಯದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಮಸೀದಿ ಆಡಳಿತ ಸಮಿತಿ ಚರ್ಚೆ ನಡೆಸಿ ಜಾತ್ರೆಗೆ ಮುನ್ನವೇ ಉರುಸ್ ಮುಗಿಸಲು ಮುಂದಾಗಿದ್ದು ಜ.12ರಿಂದ 19ರವರೆಗೆ ದಿನಾಂಕ ನಿಗದಿಪಡಿಸಿದ್ದು, ಈ ನಿರ್ಧಾರ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ಊರಿನಲ್ಲಿ ಹಿಂದಿನಿಂದಲೂ ಸೌಹಾರ್ದ ವಾತಾವರಣ ಇದ್ದು ಎರಡೂ ಧರ್ಮೀಯರ ಕಾರ್ಯಕ್ರಮ ಒಂದೇ ದಿನ ನಡೆದರೆ ಜನಜಂಗುಳಿಯಾಗಿ ಎರಡೂ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಪೆಲತ್ತಡಿ ಜಾತ್ರೆ ಬಗ್ಗೆ ಮಾಹಿತಿ ಬಂದ ಕಾರಣ ಉರುಸ್ ಕಾರ್ಯಕ್ರಮ ಬೇಗ ಆರಂಭಿಸಲಾಗಿದೆ. - ಬಿ.ಆರ್.ಮಹಮ್ಮದ್ ಹನೀಫ್ ಮಲಾರ್ ಅಧ್ಯಕ್ಷರು, ಕೇಂದ್ರ ಜುಮಾ ಮಸೀದಿ ರೆಂಜಾಡಿ ಊರಿನಲ್ಲಿ ಸೌಹಾರ್ದ ವಾತಾವರಣ ಇದ್ದಾಗ ಎಲ್ಲರೂ ನೆಮ್ಮದಿಯಿಂದ ಜೀವಿಸಲು ಸಾಧ್ಯ. ಅದರಂತೆ ಬೆಳ್ಮದಲ್ಲೂ ಎಲ್ಲರೂ ಸೌಹಾರ್ದದಿಂದ ಜೀವಿಸುತ್ತಿದ್ದಾರೆ. ಇದು ಮುಂದುವರಿಯಬೇಕಿದ್ದು ಈ ಹಿನ್ನೆಲೆಯಲ್ಲಿ ಜಾತ್ರೆ ಪ್ರಯುಕ್ತ ಉರುಸ್ ದಿನಾಂಕ ಬದಲಾಯಿಸಿದೆವು. - ಮಹಮ್ಮದ್ ರಾಫಿ ಇಮಮಿ ಕಾಮಿಲ್ ಸಖಾಫಿ ಕೊಡಗು ಖತೀಬ್, ಕೇಂದ್ರ ಜುಮಾ ಮಸೀದಿ ರೆಂಜಾಡಿ ರೆಂಜಾಡಿಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು ಪೆಲತ್ತಡಿ ಜಾತ್ರೆ ಬಗ್ಗೆ ಎಲ್ಲ ಧರ್ಮೀಯರಲ್ಲಿ ವಿಶೇಷ ಒಲವು ಇದೆ. ಭಂಡಾರ ಹೋಗುವ ರಸ್ತೆ ವಿಚಾರದಲ್ಲೂ ಮಸೀದಿ ಸಮಿತಿ ಸಹಕಾರ ನೀಡಿದ್ದಾರೆ. ಮಸೀದಿ ಮತ್ತು ಜಾತ್ರೆ ವಿಚಾರದಲ್ಲಿ ಈಗಲೂ ಪರಸ್ಪರ ಸಹಕಾರ ಭಾವನೆ ಮುಂದುವರಿದಿದೆ. - ಅಶೋಕ್ ರೈ ಬರಿಕೆ ಆಡಳಿತ ಮೊಕ್ತೇಸರರು https://www.vijayavani.net/bharathanatya-class https://www.vijayavani.net/vivekananda-jayanthi