

ಶ್ರೀರಂಗಪಟ್ಟಣ: ಹಜರತ್ ಟಿಪ್ಪು ಸುಲ್ತಾನ್ ಅವರ 233ನೇ ಉರುಸ್‌ಅನ್ನು ಮುಸ್ಲಿಮರು ಸಂಭ್ರಮ ಸಡಗರದಿಂದ ಆಚರಿಸಿದರು.
ಪಟ್ಟಣದ ಜಾಮಿಯಾ(ಮಸ್ಜೀದ್-ಎ-ಆಲಾ)ಮಸೀದಿಯಲ್ಲಿ ಮಂಗಳವಾರ ಮುಸ್ಲಿಂ ಮೌಲ್ವಿಗಳು ವಿವಿಧ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪವಿತ್ರ ಗ್ರಂಧ ಮತ್ತು ಸುಗಂಧ ದ್ರವ್ಯಗಳನ್ನು ವಿಶೇಷ ಕುಂಭಗಳಲ್ಲಿರಿಸಿ ತಲೆ ಮೇಲೆ ಹೊತ್ತು ಮೆರವಣಿಗೆ ಸಾಗಿದರಲ್ಲದೆ, ಟಿಪ್ಪು ಸಮಾಧಿ ಇರುವ 5 ಕಿ.ಮೀ ದೂರದ ಗಂಜಾಂನ ಗುಂಬಸ್ ಕಡೆಗೆ ಹೆಜ್ಜೆ ಹಾಕಿ ಹಾಕಿದರು. ಈ ವೇಳೆ ಮುಸ್ಲಿಂ ಮೌಲ್ವಿಗಳು ಕವ್ವಾಲಿ ಪದ ಹಾಡಿದರು. ಸಾಂಸ್ಕೃತಿಕ ಜನಪದ ಕಲಾವಿದರ ಲಾವಣಿ ಗೀತೆಗಳ ಜತೆಗೆ ನಗಾರೆ-ತಮಟೆ ವಾದ್ಯಗಳು ಮೊಳಗಿದವು. ಮೆರವಣಿಗೆಯಲ್ಲಿ ಕುದುರೆ ಸವಾರಿ, ಯುವಕರ ನೃತ್ಯ ಸೇರಿದಂತೆ ಮುಸ್ಲಿಂ ಮದರಸದ ವಿದ್ಯಾರ್ಥಿನಿಯರು ಹುಲಿ ಲಾಂಛನದ ಟಿಪ್ಪು ಧ್ವಜಗಳನ್ನು ಹಿಡಿದು ಸಾಗಿದ್ದು ವಿಶೇಷವಾಗಿತ್ತು. ಇದೇ ವೇಳೆ ಸಿಡಿಮದ್ದುಗಳನ್ನು ಸಿಡಿಸಲಾಯಿತು.
ಶ್ರೀರಂಗಪಟ್ಟಣ-ಗಂಜಾಂ ಮಾತ್ರವಲ್ಲದೆ ಮೈಸೂರು, ರಾಮನಗರ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದಲೂ ಮುಸ್ಲಿಮರು ಆಗಮಿಸಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.