

ರೋಣ: ಪಟ್ಟಣದ ಹಜರತ್ ಸೈಯದ್ ಶಾ ಖ್ವಾಜಾ ಹುಸೇನಶಾವಲಿ ಚಿಸ್ತಿ ಅಲ್ ಖಾದ್ರಿ ಉರುಸ್ ಅಂಗವಾಗಿ ಧರ್ಮಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಜರತ್ ಸೈಯದ್ ಶಾ ಸುಲೇಮಾನ ಶಾವಲಿ ಅಜ್ಜನವರು ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೊರಪೇಟಿ ಓಣಿಯ ದರ್ಗಾದಲ್ಲಿ ಏ.3ರಂದು ಗಂಧ (ಸಂದಲ್) ಕಾರ್ಯಕ್ರಮ ನಡೆಯಲಿದೆ. 4 ರಂದು ಉರುಸ್ ಜರುಗಲಿದೆ. ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ ಏರ್ಪಾಟಾಗಿದೆ, ರಾತ್ರಿ 10ಕ್ಕೆ ಸಂಗೀತ ಸೇವೆ, ಹಾಸ್ಯ ಸಂಜೆ ಮತ್ತು ಗೀಗಿಪದಗಳ ಗಾಯನ ಆಯೋಜಿಸಲಾಗಿದೆ ಎಂದರು.
5 ರಂದು ಜಿಯಾರತ್(ಮರಿ ಉರುಸ್) ಹಮ್ಮಿಕೊಳ್ಳಲಾಗಿದ್ದು, ಸಂಜೆ ಫಾತಿಯಾ ದುವಾ ಜರುಗುವುದು. ಮೂರು ದಿನವೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರೋಣ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ, ಧಾರವಾಡದ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ರೋಣ ಬೂದೀಶ್ವರ ಮಠದ ವಿಶ್ವನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಜರತ್ ಸೈಯದ್ ಶಾ ಸುಲೇಮಾನ್ ಶಾವಲಿ ಅಜ್ಜನವರು ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದು, ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು. ಚನ್ನಪ್ಪ ಸಜ್ಜನ, ಹುಸೇನಸಾಬ್ ಇದ್ಲಿ, ಫಕೀರಗೌಡ ತಿಮ್ಮನಗೌಡ್ರ, ಮಹೇಶ ಕಳಸಣ್ಣವರ ಇತರರಿದ್ದರು.