ಶುಕ್ರವಾರದಿಂದ ಪೇರಡ್ಕ ಮುಹಿಯದ್ದೀನ್ ಜುಮ್ಮಾ ಮಸೀದಿ ಉರೂಸ್

UROOS
Published on

ಮಡಿಕೇರಿ:

ಪೇರಡ್ಕದ ಮುಹಿಯದ್ದೀನ್ ಜುಮ್ಮಾ ಮಸೀದಿ, ವಲಿಯುಲ್ಲಾಹಿ ದರ್ಗಾಶರೀಫ್ ಪೇರಡ್ಕ-ಗೂನಡ್ಕ ಇದರ ಉರೂಸ್ ಸಮಾರಂಭ ಹಿನ್ನೆಲೆಯಲ್ಲಿ ಭಾನುವಾರ (ಫೆ.2) ಸರ್ವಧರ್ಮ ಸಮ್ಮೇಳನ ನಡೆಯಲಿದೆ ಎಂದು ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ. ಶಹೀದ್ ತಿಳಿಸಿದ್ದಾರೆ.

ಐತಿಹಾಸಿಕ ಹಿನ್ನೆಲೆಯ ಹಿಂದು ಮತ್ತು ಕ್ರಿಶ್ಚಿಯನ್ ಭಕ್ತರೂ ಇರುವ ಪೇರಡ್ಕದ ಮುಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಸುಮಾರು 95 ವರ್ಷಗಳಿಂದ ಉರೂಸ್ ಸಮಾರಂಭ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಉರೂಸ್ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರದಿಂದ (ಜ.31) ಆರಂಭವಾಗಿ ಫೆ.3ರ ತನಕವೂ ನಡೆಯಲಿದೆ. ಉರೂಸ್ ಹಿನ್ನೆಲೆಯಲ್ಲಿ ಭಾನುವಾರ (ಫೆ.2) ಸಂಜೆ 7 ಗಂಟೆಗೆ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೇರಡ್ಕದ ಮುಹಿಯದ್ದೀನ್ ಜುಮ್ಮಾ ಮಸೀದಿ ಖತೀಬ ಬಹು ಅಹ್ಮದ್ ನಈಮ್ ಫೈಜಿ ಅಲ್ ಮಅಬರಿ ನೇತೃತ್ವದಲ್ಲಿ, ಅಧ್ಯಕ್ಷ ಟಿ.ಎಂ. ಶಹೀದ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನವನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಉದ್ಘಾಟಿಸುವರು. ಸುಳ್ಯ ಆಯುರ್ವೇದಿಕ್ ಕಾಲೇಜು ಪ್ರಾಂಶುಪಾಲ ಡಾ. ಲೀಲಾಧರ, ಸಂಪಾಜೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸೋಮಶೇಖರ ಕೊಂಯಿಗಾಜೆ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಮಾಜಿ ಯೋಧರನ್ನು ಸನ್ಮಾನಿಸಲಾಗುವುದು.

ಶುಕ್ರವಾರದ (ಜ.31) ಕಾರ್ಯಕ್ರಮ ಜುಮಾ ನಮಾಜಿನ ಬಳಿ ಆರಂಭವಾಗಲಿದ್ದು, ಪೇರಡ್ಕದ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ. ಶಹೀದ್ ಧ್ವಜಾರೋಹಣ ಮಾಡಲಿದ್ದಾರೆ. ರಾತ್ರಿ 8 ಗಂಟೆಗೆ ಅಲ್‌ಹಾಜ್ ಹಮೀದಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಧಾರ್ಮಿಕ ಪ್ರಭಾಷಣ ನಡೆಸಿಕೊಡಲಿದ್ದಾರೆ. ಶನಿವಾರ (ಫೆ.1) ದಫ್ ಸ್ಪರ್ಧೆ, ಬುರ್ದಾ ಮಜ್ಲೀಸ್, ರಸೂಲ್ ಮದ್‌ಹ್ ಗಾನಂ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪೇರಡ್ಕದ ಮುಹಿಯದ್ದೀನ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ಮೈಲುಕಲ್ಲು, ಗೂನಡ್ಕ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಮುನಿರ್ ದಾರಿಮಿ, ಪ್ರಮುಖರಾದ ಅಬ್ದುಲ್ ಖಾದರ್, ಜಿ.ಕೆ. ಹಮೀದ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net