

ಮೈಸೂರು: ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜಿರೇಟಿಂಗ್ ಆ್ಯಂಡ್ ಏರ್ ಕಂಡೀಷನಿಂಗ್ ಇಂಜಿನಿಯರಿಂಗ್ ಸಂಸ್ಥೆ (ಇಶ್ರೆ) ವತಿಯಿಂದ ಡಿ.3 ರಂದು ಬೆಳಗ್ಗೆ 9.30ಕ್ಕೆ ನಗರದ ಲೇ ರುಚಿ ಹೋಟೆಲ್‌ನಲ್ಲಿ ‘ಊರ್ಜವರಣ್-2022’ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಇಶ್ರೆ ಅಧ್ಯಕ್ಷ ಅನಿಲ್ ಕುಮಾರ್ ನಾಡಿಗೇರ್ ಹೇಳಿದರು.
ಕಟ್ಟಡಗಳ ಇಂಜಿನಿಯರಿಂಗ್ ಸೇವೆಗಳನ್ನು ಗುರಿಯಾಗಿಸಿಕೊಂಡು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ್ ಮನೆಗಳು, ಎಚ್‌ವಿಎಸಿ ಮತ್ತು ಆರ್, ಅಗ್ನಿ ಮತ್ತು ಸುರಕ್ಷತೆ, ಕಟ್ಟಡಗಳ ಸ್ವಯಂಚಾಲನಾ ತಂತ್ರಜ್ಞಾನ, ಅಧಿಕ ಕಾರ್ಯಕ್ಷಮತೆಯ ಗಾಜುಗಳು, ಇಂಧನ ದಕ್ಷತೆಯ ಲೈಟಿಂಗ್, ನೈರ್ಮಲೀಕರಣ ಮತ್ತು ಜಲ ಸಂರಕ್ಷಣೆ ಉತ್ಪನ್ನಗಳ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಜೀಕೆ ಎಂಟರ್‌ಪ್ರೈಸಸ್‌ನ ಆಡಳಿತ ನಿರ್ದೇಶಕ ಜಿ.ಕೆ.ಬಾಲಕೃಷ್ಣನ್ ಹಾಗೂ ರಂಗರಾವ್ ಆ್ಯಂಡ್ ಸನ್ಸ್ ನಿರ್ದೇಶಕ ವಿಷ್ಣುರಂಗ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಪ್ರಮುಖ ವಾಸ್ತು ವಿನ್ಯಾಸಕಾರರು, ಬಿಲ್ಡರ್‌ಗಳು, ನಿರ್ವಹಣೆ ಇಂಜಿನಿಯರ್‌ಗಳು, ಪ್ರಾಜೆಕ್ಟ್ ಇಂಜಿನಿಯರ್‌ಗಳು, ಸಿಸ್ಟಂ ಡಿಸೈನರ್‌ಗಳು ಸೇರಿದಂತೆ ನಿರ್ಮಾಣ ಕ್ಷೇತ್ರದ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಶ್ರೆ ಪದಾಧಿಕಾರಿಗಳಾದ ಡಾ.ಎಸ್.ಎ.ಮೋಹನ್ ಕೃಷ್ಣ, ಆರ್.ಎ. ಶ್ರೀನಿವಾಸ್ ಇದ್ದರು.