

ರಂಗಾಯಣದ ಹಿರಿಯ ಕಲಾವಿದ ಬಸವರಾಜ ಕೊಡಗೆ ನೆನಪಿನಡಿ ಶಶಿ ಥಿಯೇಟರ್ ವತಿಯಿಂದ ‘ಉರಿಯ ಉಯ್ಯಲೆ’ ನಾಟಕವನ್ನು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಜೂ. 10 ಮತ್ತು 11 ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ.
ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಈ ನಾಟಕವನ್ನು ಬಿ.ಎನ್.ಶಶಿಕಲಾ ನಿರ್ದೇಶಿಸಿದ್ದಾರೆ. ಸುಬ್ರಹ್ಮಣ್ಯ ಮೈಸೂರು ಸಂಗೀತ ನೀಡಿದ್ದು, ಜೀವನ್‌ಕುಮಾರ್ ಹೆಗ್ಗೋಡು ಬೆಳಕಿನ ವಿನ್ಯಾಸ ಮಾಡಿದ್ದಾರೆ.
ಮಹಾಭಾರತದಲ್ಲಿ ಅತ್ಯಂತ ದುಃಖಿ ಯಾರು? ಅನೇಕ ಉತ್ತರಗಳು ಬರಬಹುದು: ನೂರು ಜನ ಗಂಡುಮಕ್ಕಳನ್ನು ಪಡೆದೂ, ಒಬ್ಬನೂ ಉಳಿಯದಂತೆ ಸರ್ವನಾಶವಾದುದನ್ನು ನೆನೆದು ಉಮ್ಮಳಿಸುವ ಗಾಂಧಾರಿಯ ಅಳಲಿನ ಮುಂದೆ ಬೇರೊಂದು ಬೇಗೆ ಇರಲು ಸಾಧ್ಯವೇ? ಮುತ್ತಯ್ಯನಾಗಿ ತನ್ನ ಮೊಮ್ಮಕ್ಕಳೇ ಪರಸ್ಪರ ಕಾದಾಡಿ ಕೊನೆಗೊಳ್ಳುವುದನ್ನು ನೋಡುತ್ತಲೇ ಶರಶಯ್ಯೆಯಲ್ಲಿ ಮಲಗಿ ಅಂತ್ಯ ಕಾಣುವ ಭೀಷ್ಮನ ನೋವಿಗೆ ಸರಿಸಾಟಿಯಾದ ಇನ್ನೊಂದು ನೋವು ಇರಲು ಸಾಧ್ಯವೇ?
ನೋವು, ಸಂಕಟ, ಸೇಡು, ಸಿಟ್ಟು, ಅಪಮಾನ-ಇಂಥ ನೂರಾರು ಉರಿಯ ಜ್ವಾಲೆಗಳಲ್ಲಿ ಜೀಕಬೇಕಾದ ಬದುಕೇ ‘ಉರಿಯ ಉಯ್ಯಲೆ’. ಕವಿ, ಕಥೆಗಾರ, ನಾಟಕಕಾರ, ಕನ್ನಡ ನುಡಿಗಡಲ ನಿರಂತರ ಈಜುಗಾರ ಎಚ್.ಎಸ್.ವೆಂಕಟೇಶಮೂರ್ತಿ ಅವರ ಈ ನಾಟಕ ದೌಪದಿಯ ಅಂತರಂಗಕ್ಕೆ ಬಿಟ್ಟ ‘ಬಿಡುಬೆಳಕು’. ಇಲ್ಲಿ ಹೆಣ್ಣಿನ ನೋವು ತೆರೆತೆರೆಗಳಲ್ಲಿ ಮೈದೆರೆಯುತ್ತದೆ. ಮಹಾಭಾರತ ಇಷ್ಟಿಷ್ಟೇ ಮುಳುಗೇಳುತ್ತದೆ.