ವೀರಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಶೀಘ್ರ ಪುನರ್ ಸ್ಥಾಪಿಸಿ: ಎ.ಎಸ್.ಪೊನ್ನಣ್ಣ

MDK04
Published on

ಮಡಿಕೇರಿ: ರಾಷ್ಟ್ರಕಂಡ ಮಹಾನ್ ಸೇನಾ ನಾಯಕ, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯರವರ ಪ್ರತಿಮೆಯನ್ನು ಶೀಘ್ರ ಪುನರ್ ಸ್ಥಾಪಿಸಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದರು.


ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಸ್ಥಳಾಂತರಿಸಲಾಗಿರುವ ವೀರಸೇನಾನಿ ಜನರಲ್ ತಿಮ್ಮಯ್ಯರವರ ಪ್ರತಿಮೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.


ಮಾಜಿ ಸಚಿವ ಎಂ.ಸಿ.ನಾಣಯ್ಯ ಹಾಗೂ ಸ್ಥಳೀಯ ಶಾಸಕ ಡಾ.ಮಂತರ್ ಗೌಡರವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದಂತೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡಬೇಕು. ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಈಗಾಗಲೇ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಕೆಎಸ್‌ಆರ್‌ಟಿಸಿ ವಿಭಾಗದಿಂದ ೧೦ ಲಕ್ಷ ರೂ. ಭರಿಸಲಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ವಿವರಿಸಿದರು.


ಕೊಡಗಿನ ಜನರ ಭಾವನೆಗೆ ಧಕ್ಕೆ ಆಗದಂತೆ ವೀರಸೇನಾನಿ ಜನರಲ್ ತಿಮ್ಮಯ್ಯರವರ ಪ್ರತಿಮೆಯನ್ನು ಪುನರ್ ಸ್ಥಾಪಿಸಲಾಗುವುದು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ತುರ್ತು ಕ್ರಮವಹಿಸುವಂತೆ ಶಾಸಕರಾದ ಎ.ಎಸ್.ಪೊನ್ನಣ್ಣ ನಿರ್ದೇಶನ ನೀಡಿದರು.


ಪ್ರತಿಮೆ ವೀಕ್ಷಣೆಗೂ ಮೊದಲು ಜನರಲ್ ತಿಮ್ಮಯ್ಯ ವೃತ್ತಕ್ಕೆ ಭೇಟಿ ನೀಡಿ ಶಾಸಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಪ್ರಮುಖರಾದ ತೆನ್ನಿರಾ ಮೈನಾ, ಬಿ.ಎಸ್.ತಮ್ಮಯ್ಯ, ಧರ್ಮಜ ಉತ್ತಪ್ಪ ಇತರರು ಇದ್ದರು.


ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಇಬ್ಬರು ತುತ್ತಾಗಿದ್ದು, ನೋವು ತಂದಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.


ಕಾಡು ಪ್ರಾಣಿಗಳ ಹಾವಳಿ ತಡೆಯಬೇಕಿದ್ದು, ಆ ನಿಟ್ಟಿನಲ್ಲಿ ಆ.೨೬ ರಂದು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಕಾಡಾನೆ ಹಾವಳಿಗೆ ತುತ್ತಾದ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಆಗಮಿಸಲಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net