

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ನಿರ್ಮಿಸಿರುವ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶೀಘ್ರವೇ ಉದ್ಘಾಟಿಸಿ, ವೈದ್ಯಕೀಯ ಸೇವೆ ಆರಂಭಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕಿನ ಹಳ್ಳಿಗಳಿಂದ ಬರುವ ಬಡ ರೋಗಿಗಳು ಹಾಗೂ ಹೆಣ್ಣು ಮಕ್ಕಳು ಸೂಕ್ತ ಚಿಕಿತ್ಸೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಸಮಪರ್ಕವಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ, ಸೇವೆಗೆ ತಜ್ಞ ವೈದ್ಯರಿಲ್ಲ. ಎಕ್ಸರೇ, ಸ್ಕಾೃನಿಂಗ್ ಯಂತ್ರಗಳಿಲ್ಲ. ಹೀಗಾಗಿ, ಸಣ್ಣಪುಟ್ಟ ವೈದ್ಯಕೀಯ ಚಿಕಿತ್ಸೆಗಳಿಗೂ ಇಲ್ಲಿನ ವೈದ್ಯರು ಬೆಳಗಾವಿಗೆ ಕಳುಹಿಸುತ್ತಿದ್ದಾರೆ ಎಂದು ದೂರಿದರು.
ಪಟ್ಟಣದ ಹೊರ ವಲಯದಲ್ಲಿ ಅಂದಾಜು 20 ಕೋಟಿ ರೂ.ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದೆ. ಆದರೆ, ಈವರೆಗೆ ಉದ್ಘಾಟನೆಯಾಗಿಲ್ಲ. ಈ ಕುರಿತಾಗಿ ಅಧಿಕಾರಿಗಳಲ್ಲಿ ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಆಸ್ಪತ್ರೆ ಉದ್ಘಾಟಿಸಿ, ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರವೇ ಪದಾಧಿಕಾರಿಗಳಾದ ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ದುಂಡಪ್ಪ ಬಡಿಗೇರ, ಅಮೂಲ ನಾವಿ, ಪ್ರತಾಪ ಪಾಟೀಲ, ಸಂಜು ಹಿರೇಮಠ, ಬಸವರಾಜ ಸಾಜನೆ, ಖಾನಪ್ಪ ಬಾಡಕರ ಇತರರಿದ್ದರು.