ವನ್ಯಜೀವಿಗಳ ಹಾವಳಿ ತಡೆಗೆ ಒತ್ತಾಯ

18SPT5
Published on

 ಸೋಮವಾರಪೇಟೆ: ಕಾಡಾನೆ ಮತ್ತು ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಯಡವಾರೆ, ಕಾಜೂರು ಮತ್ತು ಐಗೂರು ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿ ಸದಸ್ಯರು ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಭಾಗಗಳಲ್ಲಿ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದ ಸಾಕಷ್ಟು ಸಮಸ್ಯೆಯಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಹಿಂದೆ ಗ್ರಾಮಸ್ಥರು ನಡೆಸಿದ ಸಭೆಗೆ ವಲಯ ಅರಣ್ಯಾಧಿಕಾರಿಗಳು ಆಗಮಿಸಿ ರೈತರ ಅಹವಾಲುಗಳನ್ನು ಆಲಿಸಿ ಮುಂದಿನ ಒಂದು ತಿಂಗಳ ಒಳಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನಿಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಪರಿಹಾರವಾಗಿಲ್ಲ.

ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಸರಿಯಾಗಿ ನಡೆದಿಲ್ಲ. ಇಲ್ಲಿ ಅಳವಡಿಸಿರುವ ಸೋಲಾರ್ ತಂತಿ ಬೇಲಿ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಪುಂಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲು ಮನವಿ ಮಾಡಲಾಗಿತ್ತು. ಯಡವನಾಡು ಮತ್ತು ಯಡವಾರೆ ಗ್ರಾಮಗಳ ರಸ್ತೆಯ ಬದಿಯಲ್ಲಿ ಬೆಳೆದಿರುವ ಕಾಡು ಮರಗಳನ್ನು ತೆರವುಗೊಳಿಸಲು ಶಾಸಕರು ಸೂಚಿಸಿದ್ದರು. ಆದರೆ, 5-6 ಮರಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಹೀಗೆ ಹತ್ತು ಹಲವು ಸಮಸ್ಯೆಗಳು ಇಲ್ಲಿ ಇದ್ದು, ಕೂಡಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.

ಗ್ರಾಮ ಅರಣ್ಯ ರಕ್ಷಣಾ ಸಂರಕ್ಷಣಾ ಸಮಿತಿ ಸದಸ್ಯರಾದ ಮಚ್ಚಂಡ ಅಶೋಕ್, ಕೆ.ಪಿ. ರಾಯ್, ಕೆ.ಬಿ. ದೀರಜ್, ಎಂ.ಎಸ್. ಪಿಂಕು, ಎಂ.ಎಂ. ಮನು, ಟಿ.ಜೆ. ಸಂದೇಶ್, ಡಿ.ಪಿ. ಕೃಷ್ಣಪ್ಪ, ಸಿ.ಆರ್. ಪಾಪು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net